Author: Satyakam NewsDesk

  • ಯಾದಗಿರಿಗೆ ಡಾಲಿ ಮೊದಲ ಭೇಟಿ: ಅಭಿಮಾನಿಗಳ ಪ್ರೀತಿಗೆ ಋಣಿ ಎಂದ ಡಾಲಿ ಧನಂಜಯ

    ಯಾದಗಿರಿಗೆ ಡಾಲಿ ಮೊದಲ ಭೇಟಿ: ಅಭಿಮಾನಿಗಳ ಪ್ರೀತಿಗೆ ಋಣಿ ಎಂದ ಡಾಲಿ ಧನಂಜಯ

    ಸತ್ಯಕಾಮ ವಾರ್ತೆ ಯಾದಗಿರಿ:

    ನಟ ಡಾಲಿ ಧನಂಜಯ ಅವರು ಯಾದಗಿರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜನರು ಸಿನಿಮಾಗಳನ್ನು ಅಪಾರ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಈ ಪ್ರೀತಿ ಕಲಾವಿದರಿಗೆ ದೊಡ್ಡ ಶಕ್ತಿ ಎಂದು ಹೇಳಿದರು.

    ಭಾನುವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಡವರಾಸ್ಕಲ್’ ನಿರ್ದೇಶಕರೊಂದಿಗೆ ಮಾಡುತ್ತಿರುವ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಕೊನೆಯ ಶೆಡ್ಯೂಲ್ ಮಾತ್ರ ಬಾಕಿಯಿದೆ ಎಂದು ತಿಳಿಸಿದರು. ನಂತರ ಬ್ರಿಟಿಷರ ವಿರುದ್ಧ ಹೋರಾಟದ ಕಥಾಹಂದರ ಹೊಂದಿರುವ ಐತಿಹಾಸಿಕ ಸಿನಿಮಾ ‘ಹಲಗಲಿ’ ಯ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಸುಮಾರು 40 ಶೇಕಡಾ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉಳಿದ ಚಿತ್ರೀಕರಣ ಆರಂಭಿಸಲಾಗುವುದು ಎಂದರು.

    ಇದರ ಜೊತೆಗೆ ‘ಟ್ರಿಪಲ್ ಸಿಕ್ಸ್ – ಆಪರೇಶನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್ ಕೂಡ ನಿರಂತರವಾಗಿ ಸಾಗುತ್ತಿದೆ. ಈ ವರ್ಷದ ಮಧ್ಯಭಾಗದಿಂದ ತಮ್ಮ ಅಭಿನಯದ ಹಾಗೂ ನಿರ್ಮಾಣದ ಸಿನಿಮಾಗಳು ಒಂದರ ಬಳಿಕ ಒಂದಾಗಿ ಬಿಡುಗಡೆಯಾಗಲಿವೆ ಎಂದು ಧನಂಜಯ ಹೇಳಿದರು.

    ತಮ್ಮ ನಿರ್ಮಾಣದ ‘ಜೆಸಿದ ಯೂನಿವರ್ಸಿಟಿ’ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್ ಹಾಗೂ ಪ್ರೇಮ ಅವರು ಬಿಡುಗಡೆ ಮಾಡಿದ್ದಾರೆ. ಜೈಲು ಹಿನ್ನೆಲೆಯ ಈ ಸಿನಿಮಾ ಫೆಬ್ರವರಿ 6ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಹೊಸ ನಾಯಕ–ನಾಯಕಿ ಹಾಗೂ ಹೊಸ ನಿರ್ದೇಶಕರ ತಂಡವನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.

    ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಕಡಿಮೆ ದರದಲ್ಲೇ ಎಲ್ಲ ವರ್ಗದ ಪ್ರೇಕ್ಷಕರು ಸಿನಿಮಾ ನೋಡಬಹುದಾಗಿತ್ತು. ಟಿಕೆಟ್ ದರ ಸ್ವಲ್ಪ ಕಡಿಮೆಯಾದರೆ ಬಡ ಪ್ರೇಕ್ಷಕರಿಗೂ ಸಿನಿಮಾ ನೋಡುವ ಅವಕಾಶ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

    ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಪೈರಸಿ ಕುರಿತು ಮಾತನಾಡಿದ ಅವರು, ಪೈರಸಿ ಚಿತ್ರರಂಗಕ್ಕೆ ದೊಡ್ಡ ಶತ್ರು ಎಂದು ಹೇಳಿದರು. ಪ್ರೇಕ್ಷಕರು ಪೈರಸಿ ಪ್ರತಿಗಳನ್ನು ತಿರಸ್ಕರಿಸಿ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಮುಂದಾದರೆ ಮಾತ್ರ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

    ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ಜನರ ಪ್ರೀತಿ ಹಾಗೂ ಬೆಂಬಲವೇ ತಮ್ಮ ಶ್ರಮಕ್ಕೆ ದೊಡ್ಡ ಪ್ರೇರಣೆ ಎಂದು ಹೇಳಿದರು.

    ಕೊನೆಗೆ ಉತ್ತರ ಕರ್ನಾಟಕದ ಜನರ ಆತ್ಮೀಯತೆಗೆ ಋಣಿ ಎಂದು ಡಾಲಿ ಧನಂಜಯ ಹೇಳಿದರು.

  • ನ್ಯಾಷನಲ್ ಹೆರಾಲ್ಡ್‌ಗೆ ಕೋಟಿ ಕೋಟಿ ಜಾಹೀರಾತು: ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ ಮೇಲೆ ಬಿಜೆಪಿ ಗಂಭೀರ ಆರೋಪ

    ನ್ಯಾಷನಲ್ ಹೆರಾಲ್ಡ್‌ಗೆ ಕೋಟಿ ಕೋಟಿ ಜಾಹೀರಾತು: ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ ಮೇಲೆ ಬಿಜೆಪಿ ಗಂಭೀರ ಆರೋಪ


    ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಖಜಾನೆಯಿಂದ, ಕಡಿಮೆ ಓದುಗರಿರುವ ರಾಷ್ಟ್ರೀಯ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ಹಣ ಹರಿದಿದೆ ಎಂಬ ಆರೋಪವನ್ನು ಬಿಜೆಪಿ ಮುಂದಿಟ್ಟಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

    ಸಾರ್ವಜನಿಕ ಹಣವನ್ನು ಹೇಗೆ, ಯಾರಿಗೆ ಮತ್ತು ಯಾವ ಮಾನದಂಡದ ಆಧಾರದಲ್ಲಿ ಬಳಸಬೇಕು ಎಂಬ ಪ್ರಶ್ನೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಜಾಹೀರಾತು ಬಜೆಟ್‌ನ ಪಾರದರ್ಶಕತೆ ಕುರಿತು ಹೊಸ ಸಂಶಯಗಳನ್ನು ಎಬ್ಬಿಸಿದೆ.

    ಬಿಜೆಪಿ ಆರೋಪವೇನು?
    ಬಿಜೆಪಿ ಆರೋಪಿಸಿದಂತೆ, ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಸಮಾನ ಪ್ರಮಾಣದ ಹಣ ನೀಡಲಾಗಿದೆ.
    2023–24 ನೇ ಸಾಲಿನಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ₹1.90 ಕೋಟಿ ಜಾಹೀರಾತು
    2024–25 ನೇ ಸಾಲಿನಲ್ಲಿ ಸುಮಾರು ₹99 ಲಕ್ಷ ಜಾಹೀರಾತು ಹಣ ನೀಡಲಾಗಿದೆ.
    ಬಿಜೆಪಿ ಹೇಳುವ ಪ್ರಕಾರ, 2024–25 ರಲ್ಲಿ ರಾಜ್ಯ ಸರ್ಕಾರ ಎಲ್ಲಾ ರಾಷ್ಟ್ರೀಯ ಪತ್ರಿಕೆಗಳಿಗೆ ಒಟ್ಟು ₹1.42 ಕೋಟಿ ಖರ್ಚು ಮಾಡಿದ್ದರೆ, ಅದರಲ್ಲಿ ಶೇ.69ರಷ್ಟು ಹಣ ನ್ಯಾಷನಲ್ ಹೆರಾಲ್ಡ್‌ಗೆ ಮಾತ್ರ ನೀಡಲಾಗಿದೆ.

    ಕಡಿಮೆ ಓದುಗರಿರುವ, ರಾಜ್ಯದಲ್ಲಿ ಅಥವಾ ದೆಹಲಿಯಲ್ಲಿ ಸರಿಯಾದ ವಿತರಣೆ ಇಲ್ಲದ ಪತ್ರಿಕೆಗೆ ಇಷ್ಟೊಂದು ಮೊತ್ತ ನೀಡಿರುವುದೇಕೆ? ಎಂಬುದೇ ಬಿಜೆಪಿ ಪ್ರಮುಖ ಪ್ರಶ್ನೆ.

    ನ್ಯಾಷನಲ್ ಹೆರಾಲ್ಡ್ ಪ್ರೀತಿ – ಸಿದ್ದರಾಮಯ್ಯ ಸರ್ಕಾರದ ಮೇಲೆ ಚಾರ್ಜ್‌ಶೀಟ್:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಷನಲ್ ಹೆರಾಲ್ಡ್ ಮೇಲಿನ ವಿಶೇಷ ಪ್ರೀತಿ ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ಕೇವಲ ಜಾಹೀರಾತು ವಿಷಯವಲ್ಲ, ರಾಜಕೀಯ ಪ್ರೇರಿತ ನಿರ್ಧಾರ ಎಂಬ ಗಂಭೀರ ಆರೋಪವನ್ನೂ ಮಾಡಿದೆ.

    ಇನ್ನು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತೀವ್ರವಾಗಿ ಪ್ರತಿಕ್ರಿಯಿಸಿ, ನ್ಯಾಷನಲ್ ಹೆರಾಲ್ಡ್ ಸ್ಕ್ಯಾಮ್‌ನಲ್ಲಿ ತಾಯಿ–ಮಗ ಬೇಲ್ ಮೇಲೆ ಇದ್ದಾರೆ. ಅಂಥ ಪತ್ರಿಕೆಗೆ ಕರ್ನಾಟಕ ಸರ್ಕಾರದ ದುಡ್ಡು ಕೊಡೋದು ಸಿದ್ದರಾಮಯ್ಯ ಸರ್ಕಾರದ ರಾಷ್ಟ್ರೀಯ ಬೌದ್ಧಿಕ ದಿವಾಳಿತನ ಎಂದು ಕಿಡಿಕಾರಿದ್ದಾರೆ.

    ಇನ್ನು ಬಿಜೆಪಿ ನಾಯಕ ಅಶೋಕ್ ಕೂಡ ನ್ಯಾಷನಲ್ ಹೆರಾಲ್ಡ್ ಬೋಗಸ್ ಪತ್ರಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್–ಡಿಸಿಎಂ ಸಮರ್ಥನೆ ಏನು?
    ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಕ್ಕೆ ಜಾಹೀರಾತು ನೀಡುವ ಸಂಪೂರ್ಣ ಅಧಿಕಾರ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
    ಇನ್ನು ಸಚಿವ ಪ್ರಿಯಾಂಕ್ ಖರ್ಗೆ, ಇದು ಸಂಪೂರ್ಣವಾಗಿ ಕಾನೂನುಬದ್ಧ (ಲೀಗಲ್) ವಹಿವಾಟು ಎಂದು ಸ್ಪಷ್ಟಪಡಿಸಿದ್ದಾರೆ.

    ಜಾಹೀರಾತು ಹಣ – ರಾಜಕೀಯ ವಿವಾದದ ಕೇಂದ್ರಬಿಂದು:
    ಒಟ್ಟಾರೆ, ನ್ಯಾಷನಲ್ ಹೆರಾಲ್ಡ್‌ಗೆ ನೀಡಿದ ಜಾಹೀರಾತು ಹಣವು ಕೇವಲ ಆರ್ಥಿಕ ವಿಚಾರವಲ್ಲ, ಇದು ರಾಜಕೀಯ ನೈತಿಕತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹಣದ ಬಳಕೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.
    ಈ ಆರೋಪ–ಪ್ರತ್ಯಾರೋಪಗಳು ಮುಂದಿನ ದಿನಗಳಲ್ಲಿ ರಾಜಕೀಯ ಮಟ್ಟದಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

  • ನಕಲಿ ಮುಟೇಷನ್ ದಾಖಲೆ ಆರೋಪ: ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು 

    ನಕಲಿ ಮುಟೇಷನ್ ದಾಖಲೆ ಆರೋಪ: ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು 

    ಯಾದಗಿರಿ:  ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಕಲಿ ಮುಟೇಷನ್ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ ಆರೋಪದ ಮೇಲೆ ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿ ಮೂವರು ವ್ಯಕ್ತಿಗಳ ವಿರುದ್ಧ ಜಿಲ್ಲೆಯ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತಿಮ್ಮಾಪುರ ನಿವಾಸಿ ಅಶೋಕ ಅವರು ನೀಡಿದ ದೂರಿನಂತೆ, ವಣಕಿಹಾಳ ಹಾಗೂ ಹಸನಾಪುರ ಗ್ರಾಮಗಳ ವಿವಿಧ ಸರ್ವೆ ಸಂಖ್ಯೆಗಳ ಕುರಿತು ಮುಟೇಷನ್ ನಂ. 28 ಮತ್ತು 30 (05-10-1996)ಗಳ ನಕಲಿ ಪ್ರತಿಗಳನ್ನು ತಯಾರಿಸಿ, ಸರಕಾರಿ ಸೀಲ್–ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳಿಗೆ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.

    ಜಿಲ್ಲಾಧಿಕಾರಿ ಹಾಗೂ ಸುರಪುರ ತಹಸೀಲ್ದಾರ್ ಕಚೇರಿಗಳಿಂದ ನಡೆದ ಪರಿಶೀಲನೆ, ಅಭಿಲೇಖಾಲಯ ಶಾಖೆಯ ವರದಿಗಳು ಹಾಗೂ ಪಹಣಿ ದಾಖಲೆಗಳ ಪರಿಶೀಲನೆಯಿಂದ ಈ ಮುಟೇಷನ್ ಪ್ರತಿಗಳು ಕೊಟ್ಟಿ (ನಕಲಿ) ದಾಖಲೆಗಳಾಗಿವೆ ಎಂಬುದು ದೃಢಪಟ್ಟಿದೆ ಎಂದು ದೂರಿನಲ್ಲಿ  ಉಲ್ಲೇಖಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಬಸವರಾಜ ತಂದೆ ರಾಜಶೇಖರಪ್ಪ ಸಜ್ಜನ್, ಡಿಸಿಸಿ ಬ್ಯಾಂಕ್ ಕಲಬುರಗಿ ನಿರ್ದೇಶಕ ಸುರೇಶ ತಂದೆ ರಾಜಶೇಖರಪ್ಪ ಸಜ್ಜನ್ ಹಾಗೂ ಪ್ರಕಾಶ ತಂದೆ ರಾಜಶೇಖರಪ್ಪ ಸಜ್ಜನ್ ವಿರುದ್ಧ ಐಪಿಸಿ ಕಲಂ. 464, 465, 468, 471 ಮತ್ತು 420 ಅಡಿಯಲ್ಲಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಪೊಲೀಸ್ ಮೂಲಗಳು ತಿಳಿಸಿವೆ.

  • ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    • ಸಂಬಳ ಒಂದೇ, ಕೆಲಸ ಎರಡು – ನಗರಸಭೆ ಕ್ರಮಕ್ಕೆ ಆಕ್ಷೇಪ

    ವರದಿ: ಕುದಾನ್ ಸಾಬ್ 

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿರುವ ನಡುವೆಯೇ, ಇರುವ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ ನೀಡಿ, ನಗರಸಭೆಯ ಕೆಲಸಗಳ ಜೊತೆಗೆ ಪತ್ರಿಕಾ ಭವನದ ಸ್ವಚ್ಛತೆ ಕಾರ್ಯವನ್ನೂ ನಿರ್ವಹಿಸುವಂತೆ ಸೂಚಿಸಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

    ನಗರಸಭೆಯ ದೈನಂದಿನ ಕಾರ್ಯಭಾರವೇ ಹೆಚ್ಚಾಗಿರುವ ಸಂದರ್ಭದಲ್ಲಿ, ನಗರಸಭೆಯ ಖಾಯಂ ಡಿ-ಗ್ರೂಪ್ ಸಿಬ್ಬಂದಿ ಶ್ರೀಶೈಲ  ಅವರನ್ನು ನಗರಸಭೆಯ ವ್ಯಾಪ್ತಿಗೆ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದು ಆಡಳಿತಾತ್ಮಕ ಅಸಮಂಜಸತೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬರುತ್ತಿದೆ.

    ನಗರಸಭೆ ಸಿಬ್ಬಂದಿಯನ್ನು ನಗರಸಭೆಯ ಹೊರಗಿನ ಕೆಲಸಗಳಿಗೆ ಬಳಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಬಹುದು ಎಂದು ವಿದ್ಯಾವಂತರು ಅಭಿಪ್ರಾಯಪಟ್ಟಿದ್ದಾರೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಹೊಸ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವುದು ಅಥವಾ ತಾತ್ಕಾಲಿಕ ವ್ಯವಸ್ಥೆ ರೂಪಿಸುವುದು ಆಡಳಿತದ ಕರ್ತವ್ಯವಾಗಿದ್ದು, ಇರುವ ಸಿಬ್ಬಂದಿಗೆ ಹೆಚ್ಚುವರಿ ಹೊರೆ ಹಾಕುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.

    ಸಂಘದ ಹೊಣೆಗಾರಿಕೆ ಪ್ರಶ್ನಾರ್ಥಕ: ಪತ್ರಿಕಾ ಭವನದ ದಿನನಿತ್ಯದ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಮೂಲಭೂತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಆ ಭವನವನ್ನು ನಡೆಸುತ್ತಿರುವ ಸಂಘದದ್ದೇ ಆಗಿರಬೇಕು. ಆದರೆ ಸಂಘವು ತನ್ನ ಕರ್ತವ್ಯವನ್ನು ನಿರ್ವಹಿಸದೇ, ನಗರಸಭೆ ಸಿಬ್ಬಂದಿಯನ್ನು ಅವಲಂಬಿಸಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಸಂಘಕ್ಕೆ ಸಿಬ್ಬಂದಿ ಅಗತ್ಯವಿದ್ದರೆ, ತನ್ನದೇ ಮೂಲಗಳಿಂದ ನೇಮಕ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

    ಕರ್ನಾಟಕ ನಗರಸಭೆಗಳ ಸೇವಾ ನಿಯಮಗಳ ಪ್ರಕಾರ, ಖಾಯಂ ನೌಕರರನ್ನು ಅವರ ನೇಮಕಾತಿ ಹುದ್ದೆ, ವೇತನ ಶ್ರೇಣಿ ಹಾಗೂ ನಿಗದಿತ ಕಾರ್ಯವ್ಯಾಪ್ತಿಗೆ ಹೊರಗಿನ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದೆ. ಯಾವುದೇ ಹೆಚ್ಚುವರಿ ಅಥವಾ ಪ್ರಭಾರಿ ಜವಾಬ್ದಾರಿ ನೀಡಬೇಕಾದಲ್ಲಿ, ಅರ್ಹ ಪ್ರಾಧಿಕಾರದ ಲಿಖಿತ ಆದೇಶ, ಅವಧಿ ನಿಗದಿ ಹಾಗೂ ನಿಯಮಾನುಸಾರ ಭತ್ಯೆ ನೀಡುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಖಾಯಂ ನೌಕರರಾದ ಶ್ರೀಶೈಲಾ ಅವರನ್ನು ಸೇವಕ ಹುದ್ದೆಗೆ ಅಥವಾ ನಗರಸಭೆಯ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದಾದರೆ, ಅದು ಕರ್ನಾಟಕ ನಗರಸಭೆ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ. ನಗರಸಭೆ ಸಿಬ್ಬಂದಿಯನ್ನು ಸೇವಾ ನಿಯಮಗಳಿಗೆ ವಿರುದ್ಧವಾಗಿ ಹೊರಗಿನ ಕೆಲಸಗಳಿಗೆ ನಿಯೋಜಿಸಿರುವುದಾದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಡಿ. ಗ್ರೂಪ್ ಸಿಬ್ಬಂದಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಕೆಕೆ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಶಾಸಕ ಕಂದಕೂರ ಆಗ್ರಹ

    ಕೆಕೆ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಶಾಸಕ ಕಂದಕೂರ ಆಗ್ರಹ

    ಸತ್ಯಕಾಮ ವಾರ್ತೆ ಯಾದಗಿರಿ:
    ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ತಾವು ಕೊಟ್ಟ ಮಾತಿನಂತೆಯೇ ಕೂಡಲೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕೆಂದು ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದರು.
    ಗುರುವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಕಳೆದ 2024 ರ ಸೆ.17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಬಂದಾಗ ಕೆಕೆ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಕುರಿತು ನೀಡಿದ ಭರವಸೆ ಇಂದಿಗೂ ಈಡೆರಿಸಿಲ್ಲ. ಕೆಕೆಆರ್ ಡಿಬಿಗೆ 224 ಇಂಜಿನಿಯರಗಳ ಅವಶ್ಯಕತೆ ಇದೆ.‌ಆದರೇ ಕೇವಲ 22 ಇಂಜಿನಿಯರಗಳು ಮಾತ್ರ ಇದ್ದಾರೆ.‌ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕಾರಣ ಕೂಡಲೇ ಸಚಿವಾಲಯ ಸ್ಥಾಪನೆ ಮಾಡಬೇಕೆಂದು ಶಾಸಕರು ಒತ್ತಾಯಿಸಿದರು.
  • ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಯಾದಗಿರಿ: ಗುರುಮಠಕಲ್ ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಊಟ ಸೇವಿಸಿದ ಬಳಿಕ ೩೩ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ, ಭೇದಿ ಮತ್ತು ಹೊಟ್ಟೆನೋವಿನಿಂದ ಬಳಲಿರುವ ಘಟನೆ ಬೆಳಕಿಗೆ ಬಂದಿದೆ.

    ರಾತ್ರಿ ೭.೩೦ರ ಸುಮಾರಿಗೆ ಚಿಕನ್, ಚಪಾತಿ, ಅನ್ನ ಸೇವಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಗುರುಮಠಕಲ್ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.

    ಒಟ್ಟು ೧೫೦ ವಿದ್ಯಾರ್ಥಿಗಳಲ್ಲಿ ೩೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿರುವುದರಿAದ ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ ಎಂದು ಚಿಕಿತ್ಸಕ ವೈದ್ಯರು ಹೇಳಿದ್ದಾರೆ.

    ತುರ್ತು ಪರಿಸ್ಥಿತಿಯನ್ನು ಮನಗಂಡು ತಾಲೂಕ ಆಸ್ಪತ್ರೆ ವೈದ್ಯರ ಜೊತೆಗೆ ಪಟ್ಟಣದ ಸ್ಥಳೀಯ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಸೇರ್ಪಡೆಗೊಂಡು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರ ಸ್ಥಿತಿ ಈಗ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಘಟನೆಯ ಮಾಹಿತಿ ತಿಳಿದ ಜಿಲ್ಲಾ ಆಡಳಿತದ ತಂಡ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಸೀಲ್ದಾರ್ ಹಾಗೂ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದರು.

    ಗುರುಮಠಕಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಾಸ್ಟೆಲ್‌ನ ಅಡಿಗೆ, ಸಂಗ್ರಹಣೆ ಹಾಗೂ ಸ್ವಚ್ಛತೆ ಕುರಿತು ಆಹಾರ ಸುರಕ್ಷತಾ ಇಲಾಖೆಯು ತಪಾಸಣೆ ಆರಂಭಿಸಿದೆ.

    ಘಟನೆಯಿAದ ಆತಂಕಗೊAಡ ಪೋಷಕರು ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.

  • ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಸುರಪುರ: ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಅವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

    ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ವೇಳೆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.

    ಮನೆಯಲ್ಲಿ ಇತ್ತಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಬೀಗ ಮುರಿದಿರುವುದು ಕಂಡ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಉಪವಿಭಾಗದ ಪ್ರಭಾರಿ ಡಿವೈಎಸ್ಪಿ ನಾಗರಾಜ, ಪಿಐ ಉಮೇಶ್ ನಾಯಕ್, ಪಿಎಸ್ಐ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದುವರೆಗೆ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಫೋನ್‌ ಮೂಲಕ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಕೆ!

    ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಫೋನ್‌ ಮೂಲಕ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಕೆ!

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಜಿಯೋ ಬಳಕೆದಾರರಿಗೆ ಈಗ ಪ್ರಯಾಣ ಇನ್ನಷ್ಟು ಸುರಕ್ಷಿತವಾಗಲಿದೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡಲು ರಿಲಯನ್ಸ್‌ ಜಿಯೋ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಜೋಡಿಸಿ ಹೊಸ ಎಚ್ಚರಿಕೆ ವ್ಯವಸ್ಥೆಯನ್ನು ಆರಂಭಿಸಲು ಮುಂದಾಗಿವೆ. ದೇಶದಾದ್ಯಂತ 4G ಮತ್ತು 5G ನೆಟ್‌ವರ್ಕ್ ಬಳಸುವ ಜಿಯೋ ಗ್ರಾಹಕರಿಗೆ, ತಮ್ಮ ವಾಹನವು ಅಪಾಯಕಾರಿ ಪ್ರದೇಶವನ್ನು ಸಮೀಪಿಸಿದ ಕ್ಷಣದಲ್ಲೇ ನೇರವಾಗಿ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ತಲುಪುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.

    ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ ಒಂದೇ ಹೆದ್ದಾರಿಯಲ್ಲಿ ಪ್ರಯಾಣಿಸುವ ಜನರು ಅಪಾಯದ ಪ್ರದೇಶಕ್ಕೆ ತಲುಪುವ ಮುಂಚಿತವಾಗಿಯೇ ಮಾಹಿತಿ ಪಡೆದು ಎಚ್ಚರಿಕೆಯಿಂದ ಸಾಗಲು ಅವಕಾಶ ಒದಗಿಸುವುದು. ಹೆದ್ದಾರಿಯ ಕೆಲವೆಡೆ ದಟ್ಟ ಮಂಜು ಆವರಿಸಿರಬಹುದು, ಕೆಲವೆಡೆ ಜಾನುವಾರುಗಳು ರಸ್ತೆ ದಾಟುವುದು ಸಾಮಾನ್ಯ, ಕೆಲವು ಭಾಗಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿರುತ್ತವೆ, ಮತ್ತೆ ಕೆಲವೊಂದು ಮಾರ್ಗಗಳಲ್ಲಿ ಧಿಡೀರ್‌ ತಿರುವುಗಳು ಮತ್ತು ಡೈವರ್ಶನ್‌ಗಳು ಚಾಲಕರನ್ನು ಗೊಂದಲಕ್ಕೊಳಪಡಿಸುತ್ತವೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ, ಜಿಯೋ ಟವರ್‌ಗಳ ಮೂಲಕ ನೇರವಾಗಿ ಆ ಪ್ರದೇಶದ ಮಾಹಿತಿ ಗ್ರಾಹಕರ ಫೋನ್‌ಗೆ ತಲುಪಲಿದೆ.

    ಈ ಎಚ್ಚರಿಕೆಗಳು ಎಸ್‌ಎಂಎಸ್‌, ವಾಟ್ಸಾಪ್‌ ಸಂದೇಶ ಮತ್ತು ಹೈ ಪ್ರಿಯಾರಿಟಿ ವಾಯ್ಸ್ ಕಾಲ್‌ಗಳ ರೂಪದಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷವೆಂದರೆ, ನೆಟ್‌ವರ್ಕ್‌ ಸಮಸ್ಯೆಯಿರುವ ಪ್ರದೇಶಗಳಲ್ಲಿದ್ದರೂ ಈ ಅಲರ್ಟ್‌ಗಳು ತಲುಪುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎನ್ನುವುದು ಗಮನಾರ್ಹ ಸಂಗತಿ. ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಈ ವ್ಯವಸ್ಥೆಗೆ ಹೊಸ ಹಾರ್ಡ್‌ವೇರ್‌ ನಿರ್ಮಾಣದ ಅಗತ್ಯವಿಲ್ಲ; ಜಿಯೋ ಈಗಾಗಲೇ ಹೊಂದಿರುವ ಟೆಲಿಕಾಂ ಟವರ್‌ಗಳ ನೆಟ್‌ವರ್ಕ್‌ನನ್ನೇ ಬಳಸಲಾಗುತ್ತಿದೆ. ಜೊತೆಗೆ ‘ರಾಜಮಾರ್ಗಯಾತ್ರಾ’ ಆಪ್ ಮತ್ತು 1033 ತುರ್ತು ಸಹಾಯವಾಣಿ ಸಂಖ್ಯೆಯೊಂದಿಗೆ ಕೂಡ ಈ ಅಲರ್ಟ್‌ಗಳನ್ನು ಹಂತ ಹಂತವಾಗಿ ನೀಡಲಾಗುತ್ತದೆ.

    ತೊಂದರೆಗಳು ಹೆಚ್ಚು ಇರುವ ಹೆದ್ದಾರಿ ಸೆಕ್ಷನ್‌ಗಳಲ್ಲಿ ಸಂಚರಿಸುವ ಎಲ್ಲ ಜಿಯೋ ಬಳಕೆದಾರರಿಗೆ ಸ್ವಯಂಚಾಲಿತವಾಗಿ ಈ ಎಚ್ಚರಿಕೆಗಳು ತಲುಪುತ್ತವೆ. ದೇಶದಲ್ಲಿ 50 ಕೋಟಿಗೂ ಹೆಚ್ಚು ಜನರು ಜಿಯೋ ಬಳಕೆ ಮಾಡುತ್ತಿರುವುದರಿಂದ, ಈ ವ್ಯವಸ್ಥೆ ವ್ಯಾಪಕ ಮಟ್ಟದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗಲಿದೆ. ಮೊದಲ ಹಂತದಲ್ಲಿ ಆಯ್ದ ಹೆದ್ದಾರಿಗಳಲ್ಲಿ ಪೈಲಟ್‌ ಪ್ರಾಜೆಕ್ಟ್‌ ರೂಪದಲ್ಲಿ ಆರಂಭಿಸಿ, ನಂತರ ಪೂರ್ಣ ದೇಶಕ್ಕೆ ವಿಸ್ತರಿಸುವ ಯೋಜನೆ ಸಚಿವಾಲಯದ ಬಳಿ ಇದೆ ಎಂದು ತಿಳಿದುಬಂದಿದೆ.

    ದೆಶದ ಹೆದ್ದಾರಿಗಳನ್ನು ಸುರಕ್ಷಿತಗೊಳಿಸಲು ಟೆಲಿಕಾಂ ತಂತ್ರಜ್ಞಾನವನ್ನು ಈ ರೀತಿ ಉಪಯೋಗಿಸುವುದು ಹೊಸ ಪ್ರಯತ್ನ ಎನ್ನಬಹುದು. ಚಾಲಕರಿಗೆ ನೇರವಾಗಿ ಎಚ್ಚರಿಕೆ ನೀಡುವ ಈ ಕ್ರಮ, ದೂರ ಪ್ರಯಾಣ ಮಾಡುವವರಿಗೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡಲಿದೆ. ಜಿಯೋ–NHAI ಒಟ್ಟಿಗೆ ಹೆದ್ದಾರಿ ಸುರಕ್ಷತೆಯನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಜ್ಜಾಗಿವೆ ಎನ್ನಬಹುದು

  • ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ದೈಹಿಕ-ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಣಮಿಸಿವೆ. ಸಂವಹನ, ಆರ್ಥಿಕ ವಹಿವಾಟು, ವೈಯಕ್ತಿಕ ಮಾಹಿತಿ ಸಂಗ್ರಹಣೆ ಇವೆಲ್ಲವೂ ಸ್ಮಾರ್ಟ್‌ಫೋನ್ ಅವಲಂಬನೆಯ ಮೇಲೇ ನಿಂತಿದೆ. ಇದರಿಂದ ಸೈಬರ್ ಅಪರಾಧಗಳು, ಸಿಮ್ ಕಾರ್ಡ್ ದುರುಪಯೋಗ ಮತ್ತು ಡಿಜಿಟಲ್ ಟ್ರ್ಯಾಕಿಂಗ್‌ಗಳಂತಹ ಭದ್ರತಾ ಸವಾಲುಗಳು ವೇಗವಾಗಿ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲೇ ನಾಗರಿಕರ ಸುರಕ್ಷತೆ ಮತ್ತು ಮೊಬೈಲ್ ಜಾಲದ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಸಂಚಾರ್ ಸಾಥಿ’ ಆ್ಯಪ್ ಅನ್ನು ಪರಿಚಯಿಸಿತ್ತು.

    ಆದರೆ, ಇತ್ತೀಚೆಗೆ ಈ ಆ್ಯಪ್‌ನ್ನು ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಪೂರ್ವ-ಸ್ಥಾಪನೆ (Pre-Install) ಮಾಡುವುದು ಕಡ್ಡಾಯ ಎಂದು ಸರ್ಕಾರದ ಆದೇಶ ಬಂದಿತ್ತು. ಇದರಿಂದ ರಾಜಕೀಯ ವಲಯದಿಂದ, ವಿಶೇಷವಾಗಿ ವಿರೋಧ ಪಕ್ಷಗಳಿಂದ, ತೀವ್ರ ಪ್ರಶ್ನೆಗಳು ಮತ್ತು ಟೀಕೆಗಳು ಕೇಳಿಬಂದವು. ಮಾಹಿತಿ ಸ್ವಾತಂತ್ರ್ಯ, ನಾಗರಿಕರ ಗೌಪ್ಯತೆ, ಮತ್ತು ಸರ್ಕಾರದ ನಿಗಾವಹಿಸುವ ನೀತಿ ಬಗ್ಗೆ ಸಂಶಯ ವ್ಯಕ್ತವಾಗಿತ್ತು.

    ಈ ಹಿನ್ನೆಲೆಯಲ್ಲಿ ದೂರ ಸಂಪರ್ಕ ಇಲಾಖೆ (DoT) ಮಹತ್ವದ ಸ್ಪಷ್ಟನೆ ನೀಡಿದ್ದು, ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಈಗ ಕಡ್ಡಾಯವಲ್ಲ ಎಂದು ಘೋಷಿಸಿದೆ.

    ಸರ್ಕಾರದ ಅಭಿಪ್ರಾಯ ಏನು?

    ಸೈಬರ್ ಭದ್ರತೆ ಎಲ್ಲರಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದಲೇ ಮೊದಲಿಗೆ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು DoT ಹೇಳಿದೆ. ಈ ಆ್ಯಪ್‌ನ ಮೂಲಕ,

    • ನಕಲಿ ಸಿಮ್ ಕಾರ್ಡ್‌ಗಳ ವಿರುದ್ಧ ಕ್ರಮ
    • ಮೊಬೈಲ್ ಕಳೆದುಹೋದರೆ ಹೊರತೆಗೆದುಕೊಳ್ಳುವ ವ್ಯವಸ್ಥೆ
    • ಸೈಬರ್ ಮೋಸಗಳನ್ನು ತಡೆಗಟ್ಟುವ ಮಾಹಿತಿ
    • ಇಂತಹ ಸೇವೆಗಳು ನಾಗರಿಕರಿಗೆ ಲಭ್ಯವಾಗುತ್ತವೆ.

    ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದೆ. ನಾಗರಿಕರನ್ನು ಸೈಬರ್ ದುಷ್ಟ ಶಕ್ತಿಗಳಿಂದ ಕಾಪಾಡುವ ಉದ್ದೇಶವಿದೆ ಎಂದು ಇಲಾಖೆ ತಿಳಿಸಿದೆ. ಸಮಾಜದ ವಿವಿಧ ವಲಯಗಳಲ್ಲಿ ಆ್ಯಪ್‌ ಸ್ವೀಕಾರ ಹೆಚ್ಚುತ್ತಿರುವುದನ್ನು ಗಮನಿಸಿ, ಸ್ಮಾರ್ಟ್‌ಫೋನ್ ತಯಾರಕರಿಗೆ ಪೂರ್ವ-ಸ್ಥಾಪನೆ ಕಡ್ಡಾಯದಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ.

    ವಿರೋಧ ಪಕ್ಷಗಳ ಆಕ್ಷೇಪಣೆ ಏನು?

    ವಿಪಕ್ಷಗಳು ಆ್ಯಪ್ ಮೂಲಕ ಜನರ ವೈಯಕ್ತಿಕ ಮಾಹಿತಿ ಸಂಗ್ರಹಣೆ, ದೈನಂದಿನ ಚಟುವಟಿಕೆಗಳ ಮೇಲಿನ ನಿಗಾ, ಸರ್ಕಾರದ ಗೂಢಚರ್ಯೆಗೆ ಅವಕಾಶ ಇತ್ಯಾದಿ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ಈ ಒತ್ತಡದ ನಡುವೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

    ಸಂಚಾರ್ ಸಾಥಿ ಆ್ಯಪ್ ಬಳಕೆಯು ಸಂಪೂರ್ಣವಾಗಿ ಸ್ವಯಂಸೇವಾ (voluntary) ಆಗಿದ್ದು, ನಾಗರಿಕರು ತಮ್ಮ ಅಗತ್ಯ ಮತ್ತು ವಿಶ್ವಾಸ ಆಧಾರದಲ್ಲಿ ಡೌನ್‌ಲೋಡ್ ಮಾಡಿ ಬಳಸಿಕೊಳ್ಳಬಹುದು. ಡಿಜಿಟಲ್ ಭದ್ರತೆ ಹೆಚ್ಚಿಸುವ ಪ್ರಯತ್ನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ದಿಕ್ಕಿನಲ್ಲಿ ಈ ನಿರ್ಧಾರ ಪ್ರಮುಖ ಎನ್ನಲಾಗುತ್ತಿದೆ.

  • ಆರ್‌ಎಸ್‌ಎಸ್ ವಿರೋಧಿಸಿ, ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನ.25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

    ಆರ್‌ಎಸ್‌ಎಸ್ ವಿರೋಧಿಸಿ, ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನ.25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

    ಯಾದಗಿರಿ: ಸಂವಿಧಾನ ವಿರೋಧಿ ಹಾಗೂ ಕಾನೂನುಬಾಹಿರ ನಡೆ ನಡೆಸುತ್ತಿರುವ ಆರ್‌ಎಸ್‌ಎಸ್ ವಿರುದ್ಧ, ಮತ್ತು “ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಗೆ ಸ್ವಾಗತಿಸಲು ಬರೆಯಲಾಗಿದೆ” ಎಂಬ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಯನ್ನು ಖಂಡಿಸಿ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲವಾಗಿ ನ.25ರಂದು ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ತಿಳಿಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೇ ದಿನ ಈ ಪ್ರತಿಭಟನೆ ನಡೆಯಲಿದ್ದು, ಯಾದಗಿರಿಯಲ್ಲೂ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಸಂವಿಧಾನ ಪ್ರತಿಗಳು, ಅಂಬೇಡ್ಕರ್ ಭಾವಚಿತ್ರ, ನೀಲಿ ಧ್ವಜಗಳು, ತಮಟೆಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ನಂತರ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದರು.

    ಅಧಿಕೃತ ನೋಂದಣಿ ಇಲ್ಲದಿದ್ದರೂ ಶತಮಾನೋತ್ಸವ ಆಚರಿಸುತ್ತಿರುವ ಆರ್‌ಎಸ್‌ಎಸ್ ಮನುವಾದಿ ಚಿಂತನೆ ಹರಡುತ್ತಿದ್ದು, ಬಿಜೆಪಿಯ ಮುಖವಾಣಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಆರ್‌ಎಸ್‌ಎಸ್ ವಿರುದ್ಧ ಪ್ರಶ್ನೆ ಎತ್ತಿದ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬವನ್ನು ಅವಮಾನಿಸುವ ಕ್ರಮ ನಾಚಿಕೆಗೆಡು ಎಂದು ಖಂಡಿಸಿದರು.

    ನಂತರ ಮಾತನಾಡಿದ ಶಿವಲಿಂಗ ಹಸನಾಪುರ, ಸಂವಿಧಾನ–ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುವ ಶಕ್ತಿಗಳು ಸಕ್ರಿಯವಾಗಿವೆ. ಸಿಜೆಐ ಬಿ.ಆರ್. ಗವಾಯಿ ಹಾಗೂ ಅಂಬೇಡ್ಕರ್ ವಿರುದ್ಧ ನಡೆಯುತ್ತಿರುವ ಅವಹೇಳನ ಪ್ರಜಾಪ್ರಭುತ್ವಕ್ಕೆ ಅಪಾಯದ ಸೂಚನೆ ಎಂದು ಹೇಳಿದರು.

    ಪ್ರಿಯಾಂಕ್ ಖರ್ಗೆ ಅವರು ಕೇವಲ ಸಂವಿಧಾನದ ಚೌಕಟ್ಟಿನಲ್ಲಿ ನಡೆದುಕೊಳ್ಳಲು ಹೇಳಿದ್ದಕ್ಕಾಗಿ ಕೆಲ ದುಷ್ಟಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದು, ಜೀವ ಬೆದರಿಕೆ ಹಾಕುತ್ತಿರುವುದನ್ನು ಅವರು ಖಂಡಿಸಿದರು. ದಲಿತ ನಾಯಕರ ಮೇಲೆ ನಡೆಯುತ್ತಿರುವ ದಾಳಿ ಖಂಡನೀಯ ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ  ಎಂದು ಹೇಳಿದರು.

    ಹೀಗಾಗಿ  ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಂಬೇಡ್ಕರ್‌ ತತ್ವಗಳನ್ನು ನಂಬಿದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ  ಕರೆ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಚಂದಪ್ಪ ಮುನೆಪ್ಪನೋರ, ಮರೆಪ್ಪ ಕ್ರಾಂತಿ, ಭೀಮಣ್ಣ ಹುಣಸಗಿ, ತಿಪ್ಪಣ್ಣ ಶೆಳ್ಳಗಿ, ಶರಭಣ್ಣ ದೊರನಳ್ಳಿ, ತಾಯಪ್ಪ ಭಂಡಾರಿ, ಭೀಮಾಶಂಕರ ಗುಂಡಳ್ಳಿ, ರಂಗಸ್ವಾಮಿ ಕೊಂಕಲ್, ದೊಡ್ಡಪ್ಪ ಕಾಡಂಗೇರಾ, ರಮೇಶ್ ಭಾಚಿಮಟ್ಟಿ, ಚಂದ್ರು ಬಲಶೆಟ್ಟಿಹಾಳ, ಎಂ. ಪಟೇಲ್, ಬಲಭೀಮ ಬೇವಿನಹಳ್ಳಿ, ಚನ್ನಪ್ಪ ದೇವಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.