ಪರ್ಥ್‌ನ ವಾಕಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ದುರ್ಬಲ ಬ್ಯಾಟಿಂಗ್ ಪ್ರದರ್ಶನ ತೋರಿದ ಪರಿಣಾಮ ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮಳೆಯ ಅಡಚಣೆಯಿಂದ 26 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ ಕೇವಲ 136 ರನ್‌ಗಳಿಗೆಯೇ ಸಿಮಿತವಾಯಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು, ವೇಗ ಮತ್ತು ಬೌನ್ಸ್‌ನ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಸಂಕಷ್ಟ ಅನುಭವಿಸಿದರು. ನಾಯಕ ಶುಭಮನ್ ಗಿಲ್ (12), ರೋಹಿತ್ ಶರ್ಮಾ (8), ವಿರಾಟ್ ಕೊಹ್ಲಿ (0), ಹಾಗೂ ಶ್ರೇಯಸ್ ಅಯ್ಯರ್ (6) ಇವರೆಲ್ಲರೂ ಕೂಡ ಮೈದಾನಕ್ಕೆ ಇಳಿದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ (32) ಮತ್ತು ಅಕ್ಷರ್ ಪಟೇಲ್ (28) ಇವರು ಮಾತ್ರ ಸ್ವಲ್ಪ ಹೋರಾಟ ನೀಡಿದರೂ ತಂಡ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು.
ಆಸ್ಟ್ರೇಲಿಯಾ ಪರ ವೇಗದ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್, ಹೇಜಲ್‌ವುಡ್ ಮತ್ತು ಅಬ್ಬಾಟ್ ತೀವ್ರ ಆಕ್ರಮಣ ನಡೆಸಿದರು.
ಭಾರತ ನೀಡಿದ 137 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ 21.1 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು. ಆರಂಭದಲ್ಲಿ ಟ್ರಾವಿಸ್ ಹೆಡ್ (8) ಮತ್ತು ಮ್ಯಾಥ್ಯೂ ಶಾರ್ಟ್ (10) ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರೂ ನಾಯಕ ಮಿಚೆಲ್ ಮಾರ್ಶ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡವನ್ನು ತಲುಪಿಸಿದರು. ಅವರು 51 ಎಸೆತಗಳಲ್ಲಿ 46 ಅಜೇಯ ರನ್‌ಗಳನ್ನು ಬಾರಿಸಿದರು. ಜೊತೆಗೆ ಜೋಶ್ ಫಿಲಿಪ್ (37) ಮತ್ತು ಮ್ಯಾಟ್ ರೆನ್ಶಾ (21) ರನ್ ಗಳಿಸಿ ಗೆಲವು ಸುಲಭಗೊಳಿಸಿದರು.
ಭಾರತ ಪರ ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕದ ಮೊದಲ ಏಕದಿನದಲ್ಲಿ ಭಾರತಕ್ಕೆ ಈ ಸೋಲು ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಅಗ್ರ ಬ್ಯಾಟರ್‌ಗಳ ವೈಫಲ್ಯ ಹಾಗೂ ಮಳೆ ಅಡಚಣೆ ಭಾರತಕ್ಕೆ ಮುಳುವಾಗಿ ಪರಿಣಮಿಸಿತು.

