ಸತ್ಯಕಾಮ ವಾರ್ತೆ ಯಾದಗಿರಿ:
ಅಲೆಮಾರಿ ಸಮುದಾಯಗಳ ಉನ್ನತಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರಿಗೆ ರಾಜ್ಯಮಟ್ಟದ ಸಭೆಯಲ್ಲಿ ಉಂಟಾದ ಅವಮಾನ ಹಾಗೂ ಹಲ್ಲೆ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ. ಮಾಜಿ ಸಚಿವ ಹೆಚ್. ಆಂಜಿನೇಯ ಸೇರಿದಂತೆ ಕೆಲ ರಾಜಕೀಯ ನಾಯಕರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾಧ್ಯಕ್ಷ ಬಸವರಾಜ ಭಜಂತ್ರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾದ್ಯಕ್ಷ ಜುಲೈ 5ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ೪೯ ಅಲೆಮಾರಿ ಜಾತಿಗಳ ಸಭೆಯಲ್ಲಿ, ಸಮಾವೇಶಕ್ಕೆ ಆಹ್ವಾನವಿಲ್ಲದೆ ಬಂದಿದ್ದೀರಿ ಎಂದು ಪಲ್ಲವಿ ಅವರನ್ನು ವಾಗ್ದಾಳಿ ನಡೆಸಿ, ಬಳಿಕ ಶಾರೀರಿಕವಾಗಿ ದೌರ್ಜನ್ಯ ನಡೆಸಲಾಗಿದೆ. ಇದೇ ವೇಳೆ ಹೆಣ್ಣು ನಾಯಕರಾಗಿ ಉಪಸ್ಥಿತರಿದ್ದ ಜಿಲ್ಲಾಧ್ಯಕ್ಷೆ ಪ್ರಭಾವತಿ ಕೂಡ ಹಲ್ಲೆಗೆ ಒಳಗಾಗಿದ್ದು, ಅವರ ಮೇಲೆ ದಲ್ಲಾಳಿಗಳು ಮಾಡಿದ ಗುಂಡಾ ಕೃತ್ಯ ಸಮುದಾಯದ ಗೌರವಕ್ಕೆ ಪೆಟ್ಟು ತಂದುಕೊಟ್ಟಿದೆ ಎಂದರು.
ಅಲೆಮಾರಿ ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಾದ್ಯಂತ ಶ್ರಮಿಸಿ, ಎಲ್ಲಾ ೫೧ ಅಲೆಮಾರಿ/ಅರೆ ಅಲೆಮಾರಿ ಜಾತಿಗಳನ್ನು ಸಮಾನವಾಗಿ ಒಗ್ಗಟ್ಟಿಗೆ ತರಲು ಪ್ರಯತ್ನಿಸುತ್ತಿರುವ ಪಲ್ಲವಿ ಅವರ ಬೆಳವಣಿಗೆ ಸಹಿಸದವರ ತಂಡವೇ ಈ ದೌರ್ಜನ್ಯಕ್ಕೆ ಕಾರಣ ಎಂದು ಸಂಘದ ಮುಖಂಡರು ಆರೋಪಿಸಿದ್ದಾರೆ.
ಈ ಘಟನೆ ಪೂರ್ವನಿಯೋಜಿತ ಪಿತೂರಿಯಾಗಿದ್ದು, ಬೆಂಬಲಿಗರು, ಬಿಜೆಪಿ ಪಕ್ಷದ ಕೆಲವು ಮುಖಂಡರು, ದಲ್ಲಾಳಿಗಳಿಂದ ಇದು ನಡೆದಿರುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೈಗ್ರೌಂಡ್ ಠಾಣೆಯಲ್ಲಿ ಏಳ ಮಂದಿ ವಿರುದ್ಧ ಪ್ರಕರಣ ದಾಖಲಾಗಿರುವ ಸಂದರ್ಭದಲ್ಲೂ, ಪ್ರಮುಖ ಆರೋಪಿಗಳನ್ನು ಬಂಧಿಸಲು ಹಿಂಜರಿಯುತ್ತಿರುವ ಸರಕಾರದ ನಿರ್ಲಕ್ಷ್ಯತೆಯನ್ನು ಸಂಘದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಇನ್ನೂ ಸಂಘದ ಮನವಿಯಲ್ಲಿ, ಹೆಚ್. ಆಂಜಿನೇಯ ಅವರನ್ನು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಿ, ಪಕ್ಷದಿಂದಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಲಾಗಿದೆ. ಇಲ್ಲವಾದರೆ ರಾಜ್ಯದಾದ್ಯಂತ ಆಕ್ರೋಶಾತ್ಮಕ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈ ಘಟನೆ, ಅಲೆಮಾರಿ ಸಮುದಾಯದ ಹೆಮ್ಮೆಯ ಮೇಲಿನ ದಾಳಿಯಾಗಿ ಪರಿಗಣಿಸಲ್ಪಡುತ್ತಿದ್ದು, ಅಧಿಕಾರ, ರಾಜಕೀಯ ಮತ್ತು ಸಮುದಾಯ ಆಳವಾದ ಸಂಘರ್ಷದ ಚಿಹ್ನೆಯಾಗಿ ಪರಿಣಮಿಸಿದೆ. ಪಲ್ಲವಿ ವಿರುದ್ಧ ನಡೆದ ಕೃತ್ಯ ಕೇವಲ ರಾಜಕೀಯ ಆರೋಪವಲ್ಲ, ಇದು ಸಮುದಾಯದ ಅವಮಾನವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣ ಸ್ಪಷ್ಟ ಮತ್ತು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ಕುಳುವ ಮಹಾಸಂಘ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರಾಜ್ಯ ಮುಖಂಡ ಭೀಮರಾಯ ರಂಗAಪೇಠ, ಶಿವಪ್ಪ ಭಜಂತ್ರಿ, ಯಲಸತ್ತಿ, ಆಂಜನೇಯ ಭಜಂತ್ರಿ ಮಸ್ಕನಳ್ಳಿ, ಖಂಡಪ್ಪ ಭಜಂತ್ರಿ ಸುರಪುರ, ಹಣಮಂತ ಭಜಂತ್ರಿ ಗೋಗಿ, ಬಸವರಾಜ ಭಜಂತ್ರಿ ಶಿವಪುರ, ಆನಂದ ಭಜಂತ್ರಿ ಗೋಪಳಾಪುರ, ಸಾಬಣ್ಣ ಭಜಂತ್ರಿ ಗಣಪುರ, ಸಂತೋಷ ಭಜಂತ್ರಿ ಮದ್ರಿಕಿ, ರಮೇಶ ಭಜಂತ್ರಿ ಗೋಗಿ, ಗಂಗಪ್ಪ ಭಜಂತ್ರಿ ಅರಕೇರಾ, ಬಸವರಾಜ ಚಟ್ನಳ್ಳಿ, ಶಂಕರ್ ಭಜಂತ್ರಿ ಹೊಸಕೇರಾ, ಆಶಪ್ಪ ಭಜಂತ್ರಿ ಅರಕೇರಾ ಸೇರಿ ಅನೇಕರಿದ್ದರು.

