ಏಷ್ಯಾ ಕಪ್ 2025 ಮುಗಿದು ತಿಂಗಳಾದರೂ, ಭಾರತ ಜಯಿಸಿದ ಟ್ರೋಫಿ ಇನ್ನೂ ಟೀಂ ಇಂಡಿಯಾ ಕೈಗೆ ತಲುಪಿಲ್ಲ! ಈ ಅಸಾಮಾನ್ಯ ಸ್ಥಿತಿಯು ಈಗ ಕ್ರಿಕೆಟ್ ವಲಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ದುಬೈ ಕಚೇರಿಯಲ್ಲಿ ಇರಿಸಿಕೊಂಡಿರುವುದು ಬಿಸಿಸಿಐನ (BCCI) ಕೆಂಗಣ್ಣಿಗೆ ಗುರಿಯಾಗಿದೆ.
ಸೆಪ್ಟೆಂಬರ್ 28ರಂದು ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತ್ತು. ಆದರೆ ಪಂದ್ಯ ಅಂತ್ಯದ ವೇಳೆ ಟ್ರೋಫಿ ವಿತರಣಾ ಸಮಾರಂಭ ನಡೆಯಲಿಲ್ಲ. ಕಾರಣವೆಂದರೆ ಟೀಂ ಇಂಡಿಯಾ ಆಟಗಾರರು ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು. ನಖ್ವಿ ಅವರು ಪಾಕಿಸ್ತಾನದ ಆಂತರಿಕ ಸಚಿವರಾಗಿರುವುದರ ಜೊತೆಗೆ, ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿಯ ನಂತರ ರಾಜಕೀಯ ಹೇಳಿಕೆಗಳನ್ನು ನೀಡಿದ ಕಾರಣದಿಂದಾಗಿ ಭಾರತೀಯ ತಂಡ ಅವರು ನೀಡುವ ಟ್ರೋಫಿಯನ್ನು ಸ್ವೀಕರಿಸದ ಸ್ವೀಕರಿಸಿರಲಿಲ್ಲ.
ಈ ವಿವಾದದ ನಂತರ ಟ್ರೋಫಿಯನ್ನು ACC ಕಚೇರಿಯಲ್ಲಿ ಇರಿಸಲಾಗಿದೆ. ಇದರಿಂದ ಟ್ರೋಫಿ ಭಾರತಕ್ಕೆ ಹಸ್ತಾಂತರವಾಗದೆ, ಒಂದು ತಿಂಗಳಾದರೂ ದುಬೈಯಲ್ಲೇ ಉಳಿಯಿತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇದೀಗ ಅಧಿಕೃತ ಇ-ಮೇಲ್ ಮೂಲಕ ಮೊಹ್ಸಿನ್ ನಖ್ವಿಗೆ ತೀವ್ರ ಎಚ್ಚರಿಕೆ ನೀಡಿದೆ. ಟ್ರೋಫಿಯನ್ನು ತಕ್ಷಣ ಭಾರತಕ್ಕೆ ಕಳುಹಿಸದಿದ್ದರೆ ವಿಷಯವನ್ನು ಐಸಿಸಿಗೆ (ICC) ಒಪ್ಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಟೀಂ ಇಂಡಿಯಾ ಗೆದ್ದ ಟ್ರೋಫಿ ದುಬೈ ಕಚೇರಿಯಲ್ಲಿ ಉಳಿದಿರುವುದು ರಾಷ್ಟ್ರದ ಗೌರವಕ್ಕೆ ಧಕ್ಕೆ ಟ್ರೋಫಿಯನ್ನು ತಕ್ಷಣ ಹಸ್ತಾಂತರಿಸಬೇಕೆಂದು ನಾವು ನಖ್ವಿಗೆ ಸೂಚಿಸಿದ್ದೇವೆ, ಒಂದು ವೇಳೆ ಅವರು ನಿರ್ಲಕ್ಷಿಸಿದರೆ ನಾವು ಐಸಿಸಿಗೆ ದೂರು ನೀಡುತ್ತೇವೆ,” ಎಂದು ತಿಳಿಸಿದ್ದಾರೆ.
ಆದರೆ ನಖ್ವಿಯ ಪ್ರತಿಕ್ರಿಯೆ ವಿವಾದವನ್ನು ಮತ್ತಷ್ಟು ಹುಟ್ಟುಹಕಿದೆ. ಅವರು “ಬಿಸಿಸಿಐ ಪ್ರತಿನಿಧಿಗಳು ದುಬೈಗೆ ಬಂದು ನನ್ನಿಂದಲೇ ಟ್ರೋಫಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಸಿಸಿಐ ಈ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದು, “ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ” ಎಂದು ಎಲ್ಲರಿಗೂ ಸ್ಪಷ್ಟಪಡಿಸಿದೆ.
ಟ್ರೋಫಿಯು ಪ್ರಸ್ತುತ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲಿಯೇ ಇರಿಸಲಾಗಿದೆ. ನಖ್ವಿಯ ಅನುಮತಿಯಿಲ್ಲದೆ ಅದನ್ನು ಸ್ಥಳಾಂತರಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಅವರು ಹೇಳಿರುವಂತೆ, “ಸೂಕ್ತ ಸಮಯದಲ್ಲಿ ನಾನು ಸ್ವತಃ ಟ್ರೋಫಿಯನ್ನು ಹಸ್ತಾಂತರಿಸುತ್ತೇನೆ.” ಆದರೆ ಬಿಸಿಸಿಐಗೆ ಕಾಯುವ ಮನಸ್ಥಿತಿಯಲ್ಲಿಲ್ಲ.
ಕ್ರೀಡೆ ಮತ್ತು ರಾಜಕೀಯ ಬೇರೆ ಎಂಬ ತತ್ವವನ್ನು ಮರೆತು, ಈ ವಿವಾದವು ರಾಜಕೀಯ ಬಣ್ಣ ತಾಳಿರುವುದು ದುಃಖಕರ. ಪಾಕಿಸ್ತಾನದ ರಾಜಕೀಯ ನಾಯಕರಾದ ನಖ್ವಿ ಕ್ರಿಕೆಟ್ ವೇದಿಕೆಯನ್ನು ತಮ್ಮ ನಿಲುವು ಪ್ರದರ್ಶನದ ಸ್ಥಳವನ್ನಾಗಿ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ.
ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಮಣಿಸಿ ಏಷ್ಯಾ ಕಪ್ ಗೆದ್ದರೂ, ಟ್ರೋಫಿ ಮಾತ್ರ ಇನ್ನೂ ಭಾರತಕ್ಕೆ ತಲುಪಿಲ್ಲ. ಇದು ಕೇವಲ ಕ್ರೀಡಾ ಪ್ರಶಸ್ತಿ ವಿಚಾರವಲ್ಲ ರಾಷ್ಟ್ರದ ಗೌರವದ ವಿಷಯವಾಗಿದೆ.

