ಗುರುಮಠಕಲ್: ಸಮಾಜದ ಮಕ್ಕಳು ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಹಿರಿಯ ವಿಜ್ಞಾನಿ ಸಖಾರಾಮ ಶ್ರೀನಿವಾಸಲು ಕರೆ ನೀಡಿದರು.
ಪಟ್ಟಣದ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು, ಗುರುಮಠಕಲ್ ಸಮಾಜ ಸಾಕಷ್ಟು ಪ್ರಭಾವಶಾಲಿಯಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದೆ. ಕೌಟುಂಬಿಕ ಜೀವನ ಸಹ ಉತ್ತಮ ಮಟ್ಟದಲ್ಲಿದೆ. ಸಮಾಜದ ಮಗಳು ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದು ಹೆಮ್ಮೆಯ ವಿಷಯ.
ಜೀವನ ಶೈಲಿ ಸಾಕಷ್ಟು ಬದಲಾಗಿದೆ. ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುಂದೆ ಶ್ರಮಿಸಬೇಕು ಎಂದು ಕರೆ ನೀಡಿದರು. ಜಯಂತಿ ಶುಭ ಸಂದರ್ಭದಲ್ಲಿ ಐಎಎಸ್ ಮಾಡುವ ಸಂಕಲ್ಪ ಮಾಡೋಣ ಎಂದರು.
ಪ್ರಗತಿ ಪಥದಲ್ಲಿ ಸಾಗುತ್ತಿರುವ ಯುವ ಸಮೂಹ ಇನ್ನು ಉನ್ನತ ಸ್ಥಾನಕ್ಕೆ ಬೆಳೆಯಲು ಪ್ರೋತ್ಸಾಹ ನೀಡಬೇಕು, ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಬುಡ್ಡಪ್ಪ ಜನಾರ್ಧನ ಮಾತನಾಡಿ, ಪೌರಾಣಿಕ ಹಿನ್ನೆಲೆಯುಳ್ಳ ಮಹಾರಾಜರ ಜಯಂತಿಯು ಗುರುಮಠಕಲ್ ನಲ್ಲಿ 55 ವರ್ಷಗಳಿಂದ ಆಚರಣೆ ಮಾಡುತ್ತ ಬರಲಾಗುತ್ತಿದೆ, ಸಹಸ್ತ್ರಾರ್ಜುನ ಮಹಾರಾಜರ ವಂಶಸ್ಥರಾದ ನಮಗೆ ಅವರ ಆದರ್ಶಗಳನ್ನು ಅರಿಯಬೇಕು, ರಾಮಾಯಣ, ಮಹಾಭಾರತದಲ್ಲಿ ಕಾರ್ತವೀರಾರ್ಜುನರ ಉಲ್ಲೇಖವಿದೆ. ಸಹಸ್ರ ಬುಜಗಳ ವರ ಪಡೆದ ಹಿನ್ನೆಲೆ ಸಹಸ್ತ್ರಾರ್ಜುನ ಹೆಸರು ಬಂದಿದೆ.
ಆಧ್ಯಾತ್ಮ ಶಕ್ತಿ ಯಿಂದ ದತ್ತಾತ್ರೇಯ ರಿಂದ ವರ ಪಡೆದಿದ್ದಾರೆ. ವೀರ ಪರಾಕ್ರಮಿ ರಾಜಾರಾಗಿದ್ದಾರೆ. ರಾವಣ ಶಿವ ಪೂಜೆಯಲ್ಲಿ ತೊಡಗಿದ್ದಾಗ ನದಿಯ ಪ್ರವಾಹ ಹೆಚ್ಚಾಗಿ ಯುದ್ದವಾಯಿತು. ಮಹಾರಾಜರು ರಾವಣನನ್ನು ಬಂಧಿಯಾಗಿ ಮಾಡಿದ್ದರು.
ಮಹರ್ಷಿ ಜಮದಾಗ್ನಿ ಆಶ್ರಮದಿಂದ ಕಾಮಧೇನು ಗೋವು ತಂದಿದ್ದರು ಈ ಹಿನ್ನೆಲೆಯಲ್ಲಿ 21 ಬಾರಿ ಯುದ್ಧವಾಗಿತ್ತು ಎಂದರು, ನ್ಯಾಯಯುತ, ಪರಾಕ್ರಮಿ, ಶೌರ್ಯ ಮಹಾನ್ ರಾಜರ ವಂಶದಲ್ಲಿ ಜನಿಸಿದ ನಾವು ಪುಣ್ಯವಂತರು ಎಂದರು.
ಅತಿಥಿಗಳಾಗಿ ಹಣಮಂತರಾವ ಗೊಂಗಲೆ ಮಾತನಾಡಿ, ಭವ್ಯವಾಗಿ ಮಹಾರಾಜರ ಜಯಂತಿ ಸಂತಸ. ವ್ಯಾಪಾರವೇ ಪ್ರಮುಖ ಉದ್ಯೋಗ ಮಾಡಿಸಿಕೊಂಡಿದ್ದ ನಾವು, ನಮ್ಮ ಸಮಾಜದದಲ್ಲಿ ಶೈಕ್ಷಣಿಕ ಕ್ರಾಂತಿ ಯಾಗುತ್ತದೆ. ಐಎಎಸ್, ಐಪಿಎಸ್ ತರಬೇತಿಗೆ ನೆರವು, ಮಾರ್ಗದರ್ಶನ ಸಹಕಾರ ನೀಡಲು ಚಿಂತನೆಯಾಗಬೇಕು ಎಂದು ಮನವಿ ಮಾಡಿದರು.
ಎಂತಹ ಕಷ್ಟವೇ ಇರಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಪ್ರೊ. ಡಾ. ಯಶವಂತರಾವ ಮೇಂಗಜಿ ಮಾತನಾಡಿದರು. ಚಂದುಲಾಲ ಚೌಧರಿ ಅಧ್ಯಕ್ಷೀಯ ಮಾತನಾಡಿದರು.
ಪ್ರಮುಖರಾದ ರಾಮಕಿಶನರಾವ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಅಂಬಾದಾಸ ಜೀತ್ರಿ, ಜವಾಹರಲಾಲ್ ಮೇಂಗಜಿ, ಯಶವಂತರಾವ ಚೌಧರಿ, ವಿನಾಯಕ ಜನಾರ್ಧನ, ಭರತ ಜೀತ್ರಿ, ಶೋಭಾಬಾಯಿ ರಂಗಾಪುರ, ಸುಷ್ಮಾ ಚೌಧರಿ ವೇದಿಕೆಯಲ್ಲಿದ್ದರು.
ಈ ವೇಳೆ ಸಾಧಕ ಮಕ್ಕಳಿಗೆ ಸನ್ಮಾನ ಸಮಾರಂಭ ನಡೆಯಿತು. ಇದಕ್ಕೂ ಮೊದಲು ಅಂಕಮ್ಮ ದೇವಸ್ಥಾನದಲ್ಲಿ ಜಯಂತಿ ಹಿನ್ನೆಲೆ ದೇವಿಯ ಅಭಿಷೇಕ, ಸಹಸ್ತ್ರಾರ್ಜುನ ಮಹಾರಾಜರ ಪೂಜೆ ನೆರವೇರಿತು. ಬಳಿಕ ಮುಖ್ಯ ಬೀದಿಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆಯಿತು. ಶಶಿಕಾಂತ ಜನಾರ್ಧನ ನಿರೂಪಿಸಿದರು.ಮಾಣಿಕಪ್ರಭು ಚೌಧರಿ ವಂದಿಸಿದರು.
