
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ಗೊಂದಲಕ್ಕೆ ಸ್ಪಷ್ಟತೆ ಸಿಗಬೇಕೆಂಬ ಆಶಯದೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಕೆಶಿ, ಇದೀಗ ಅನಿವಾರ್ಯ ಕಾರಣಕ್ಕಾಗಿ ಬೀದರ್ಗೆ ತೆರಳಿ ಮತ್ತೆ ದೆಹಲಿಯತ್ತ ವಾಪಸ್ ಆಗಲಿದ್ದಾರೆ.
ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಹೈದರಾಬಾದ್ ಮೂಲಕ ಬೀದರ್ಗೆ ಆಗಮಿಸಲಿದ್ದು, ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ ನಂತರ ಮತ್ತೆ ದೆಹಲಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ನಾಯಕರನ್ನು ಭೇಟಿಯಾಗುವ ಉದ್ದೇಶ ಅವರದ್ದಾಗಿದೆ.
ಇದಕ್ಕೂ ಮೊದಲು ಅಸ್ಸಾಂ ವಿಧಾನಸಭೆ ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಲು ಡಿಕೆಶಿ ದೆಹಲಿಗೆ ತೆರಳಿದ್ದರು. ಅಸ್ಸಾಂ ವೀಕ್ಷಕರಾಗಿ ನೇಮಕಗೊಂಡಿರುವ ಕಾರಣ ಈ ಸಭೆ ಅವರಿಗೆ ರಾಜಕೀಯವಾಗಿ ಮಹತ್ವದ್ದಾಗಿತ್ತು. ಸಭೆಯ ವೇಳೆ ರಾಹುಲ್ ಗಾಂಧಿ ಅವರನ್ನು ಮುಖಾಮುಖಿಯಾಗಿ ಭೇಟಿಯಾದರೂ, ಒನ್ ಟು ಒನ್ ಮಾತುಕತೆಗೆ ಅವಕಾಶ ಸಿಗಲಿಲ್ಲ. ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಖರ್ಗೆ ಮೂಲಕ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಡಿಕೆಶಿ ಇದ್ದಾರೆ.
ಇದೇ ವೇಳೆ ಕೇರಳ ವೀಕ್ಷಕರಾಗಿ ನೇಮಕಗೊಂಡಿರುವ ಸಚಿವ ಕೆ.ಜೆ. ಜಾರ್ಜ್ ದೆಹಲಿಗೆ ತೆರಳುತ್ತಿದ್ದಂತೆಯೇ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದು ಕಾಂಗ್ರೆಸ್ ವಲಯದಲ್ಲಿ ಗಮನ ಸೆಳೆದಿದೆ. ದೆಹಲಿಯಲ್ಲಿ ಕೆಲ ದಿನಗಳಿಂದ ವಾಸ್ತವ್ಯ ಹೂಡಿದ್ದರೂ ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಇನ್ನೂ ನೇರ ಮಾತುಕತೆ ಅವಕಾಶ ಸಿಗದಿರುವುದು ಚರ್ಚೆಗೆ ಕಾರಣವಾಗಿದೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಹಾಕಿದ್ದ ಟ್ವೀಟ್ಗಳು ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ಇನ್ನಷ್ಟು ಇಂಧನ ಹಾಕಿದ್ದವು. ಈ ಕುರಿತು ಸ್ವತಃ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಟ್ವೀಟ್ಗೆ ನಾಯಕತ್ವ ರಾಜಕೀಯದೊಂದಿಗೆ ಯಾವುದೇ ಸಂಬಂಧ ಇಲ್ಲ, ಅದು ಮೇಕೆದಾಟು ವಿಚಾರಕ್ಕೆ ಸಂಬಂಧಪಟ್ಟದ್ದು ಎಂದು ಹೇಳಿದ್ದಾರೆ. ಆದರೂ ಕಾಂಗ್ರೆಸ್ ಒಳವಲಯದಲ್ಲಿ ನಡೆಯುತ್ತಿರುವ ಚರ್ಚೆಗಳು ತಣ್ಣಗಾಗಿಲ್ಲ.
ಒಟ್ಟಾರೆ, ನಾಯಕತ್ವ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲದಿದ್ದರೂ, ದೆಹಲಿಯ ರಾಜಕೀಯ ಚಲನವಲನಗಳು ಮತ್ತು ಡಿಕೆ ಶಿವಕುಮಾರ್ ಅವರ ನಿರಂತರ ಪ್ರಯತ್ನಗಳು ರಾಜ್ಯ ಕಾಂಗ್ರೆಸ್ ರಾಜಕಾರಣವನ್ನು ಮತ್ತೆ ಕುತೂಹಲದ ಹಂತಕ್ಕೆ ತಂದು ನಿಲ್ಲಿಸಿವೆ. ಮುಂದಿನ ಕೆಲ ದಿನಗಳಲ್ಲಿ ಹೈಕಮಾಂಡ್ ಭೇಟಿಗಳು ಯಾವ ಸಂದೇಶ ನೀಡಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.
