
ʻಬಿಗ್ ಬಾಸ್ ಕನ್ನಡ ಸೀಸನ್ 12ʼ ಫಿನಾಲೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ವಿನ್ನರ್ ಕುರಿತ ಚರ್ಚೆ ಜೋರಾಗಿದೆ. ಯಾರು ಕಿರೀಟ ಹೊಡೆಯುತ್ತಾರೆ ಎಂಬ ಕುತೂಹಲದ ನಡುವೆ ಈಗ ನಟ ಶಿವರಾಜ್‌ಕುಮಾರ್ ಅವರ ಹೇಳಿಕೆ ದೊಡ್ಡ ಮಟ್ಟದ ಗಮನ ಸೆಳೆದಿದೆ. “ಈ ಸೀಸನ್ ಗಿಲ್ಲಿಯದ್ದೇ” ಎಂಬ ಶಿವಣ್ಣ ಮಾತುಳ್ಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಗಿಲ್ಲಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಈ ಸೀಸನ್ ಅಂತಿಮ ಹಂತ ತಲುಪುತ್ತಿದ್ದಂತೆ ವೋಟಿಂಗ್, ಅಭಿಮಾನಿಗಳ ಅಭಿಯಾನ, ರ್ಯಾಲಿ, ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳು ಎಲ್ಲವೂ ಗಿಲ್ಲಿ ಪರವಾಗಿಯೇ ಕಾಣಿಸುತ್ತಿವೆ. ಸಾಮಾನ್ಯ ವೀಕ್ಷಕರಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳವರೆಗೂ ಗಿಲ್ಲಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇಷ್ಟು ಮಟ್ಟಿಗೆ ಜನಪ್ರೀತಿ ಪಡೆದ ಸ್ಪರ್ಧಿ ಕನ್ನಡದ ʻಬಿಗ್ ಬಾಸ್ʼ ಇತಿಹಾಸದಲ್ಲೇ ವಿರಳ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಗಿಲ್ಲಿ ವೀಕ್ಷಕರ ಮನಸ್ಸು ಗೆದ್ದಿರುವುದಕ್ಕೆ ಮುಖ್ಯ ಕಾರಣ ಅವರ ನ್ಯಾಚುರಲ್ ಆಟ. ಯಾವುದೇ ಕೃತಕತೆ ಇಲ್ಲದೆ, ತಮ್ಮದೇ ಶೈಲಿಯ ಕಾಮಿಡಿ, ಸರಳ ನಡವಳಿಕೆ ಹಾಗೂ ಎಂಟರ್‌ಟೈನ್‌ಮೆಂಟ್ ಮೂಲಕ ಅವರು ಜನರಿಗೆ ಹತ್ತಿರವಾಗಿದ್ದಾರೆ. ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ “ವಿನ್ನರ್ ಫಿಕ್ಸ್” ಎಂಬ ಮಟ್ಟಿಗೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುವುದು ಇದರ ಸ್ಪಷ್ಟ ಉದಾಹರಣೆ.
ಗಿಲ್ಲಿ ಹಾಗೂ ಶಿವರಾಜ್‌ಕುಮಾರ್ ಅವರ ಪರಿಚಯ ಹೊಸದಲ್ಲ. ಜೀ ಕನ್ನಡದ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ವೇದಿಕೆಯಲ್ಲಿ ಗಿಲ್ಲಿಯ ಪ್ರದರ್ಶನ ನೋಡಿ ಶಿವಣ್ಣ ಮೆಚ್ಚಿಕೊಂಡಿದ್ದರು. ಆ ಕಾರ್ಯಕ್ರಮದಲ್ಲೇ “ಟ್ರೂ ಹಾನೆಸ್ಟ್ ಎಂಟರ್‌ಟೈನರ್” ಎಂದು ಗಿಲ್ಲಿಯನ್ನು ಹೊಗಳಿದ್ದ ಶಿವಣ್ಣ, ಅವರ ಎನರ್ಜಿ ಮತ್ತು ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗಿಲ್ಲಿಯ ಕಾಮಿಡಿ ಹಾಗೂ ನೃತ್ಯ ಶೈಲಿ ಅಂದಿನ ಜಡ್ಜ್‌ಗಳನ್ನೇ ಮನರಂಜಿಸಿದ್ದದ್ದು ಎಲ್ಲರಿಗೂ ನೆನಪಿದೆ.
ಇದೀಗ ಹೊರಬಿದ್ದಿರುವ ವಿಡಿಯೋದಲ್ಲಿ ಶಿವರಾಜ್‌ಕುಮಾರ್ ಅವರು ಸ್ಪಷ್ಟವಾಗಿ “ಈ ಸೀಸನ್ ಗಿಲ್ಲಿನೇ ಗೆಲ್ಲೋದು” ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತಂದಿದೆ. ಜೊತೆಗೆ ಗಿಲ್ಲಿಗೆ “ಆಲ್ ದಿ ಬೆಸ್ಟ್” ಎಂದು ಶುಭಾಶಯ ಕೋರಿರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತದೆ. ಈ ಮಾತುಗಳು ಹೊರಬಿದ್ದ ಕೂಡಲೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಗಿಲ್ಲಿ ಪರ ವಾತಾವರಣ ಇನ್ನಷ್ಟು ಗಟ್ಟಿಯಾಗುತ್ತಿದೆ.
ಫಿನಾಲೆ ಹತ್ತಿರವಾಗುತ್ತಿದ್ದಂತೆ ಎಲ್ಲರ ಕಣ್ಣೂ ಒಂದೇ ಪ್ರಶ್ನೆಯ ಮೇಲೆ ಇದೆ ಶಿವಣ್ಣ ಭವಿಷ್ಯ ನಿಜವಾಗುತ್ತಾ? ಗಿಲ್ಲಿ ಈ ಸೀಸನ್ ಕಿರೀಟ ಧರಿಸುತ್ತಾನಾ? ಇದಕ್ಕೆ ಉತ್ತರ ಸಿಗಲು ಇನ್ನೂ ಕೆಲವೇ ದಿನಗಳು ಬಾಕಿ. ಆದರೆ, ಈ ಕ್ಷಣಕ್ಕೆ ಮಾತ್ರ ಗಿಲ್ಲಿ ಪರ ಅಲೆ ಜೋರಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
