
ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಸ್ಪಷ್ಟವಾಗಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯವನ್ನು ತಾವೇ ನಿರ್ಧರಿಸುವುದಿಲ್ಲ, ಅದು ಸಂಪೂರ್ಣವಾಗಿ ರಾಜ್ಯದ ಜನತೆಯ ಆಶಯದ ಮೇಲೆ ನಿಂತಿದೆ ಎಂದು ಹೇಳಿದರು. ನಾನು ಯಾವ ಸ್ಥಾನದಲ್ಲಿ ಇರಬೇಕು, ಯಾವ ಸಮಯದಲ್ಲಿ ರಾಜ್ಯ ರಾಜಕೀಯಕ್ಕೆ ಮರಳಬೇಕು ಎಂಬುದನ್ನು ಜನತೆಯೇ ತೀರ್ಮಾನಿಸುತ್ತಾರೆ. ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತುಗಳ ಮೂಲಕ ಅವರು ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವನ್ನೂ ನೀಡಿದರು.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ಮಾತನಾಡಿದ ಕೇಂದ್ರ ಸಚಿವರು, ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದರು. ಸಂಕ್ರಾಂತಿ ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಹಬ್ಬ. ಈ ಬಾರಿ ಪ್ರಕೃತಿಯ ಸಹಕಾರ ಸಿಗಲಿ, ಕಾಲಕಾಲಕ್ಕೆ ಮಳೆ ಬಂದು ಕೃಷಿಕರ ಬದುಕು ಸುಗಮವಾಗಲಿ ಎಂದು ಅವರು ಆಶಿಸಿದರು. ಸುಗ್ಗಿ ಮತ್ತು ಸಮೃದ್ಧಿಯ ಸಂಕೇತವಾದ ಈ ಹಬ್ಬ ಎಲ್ಲರ ಮನೆ ಮನಗಳಲ್ಲಿ ಸುಖ, ಸಂತೋಷ ಮತ್ತು ನೆಮ್ಮದಿ ತುಂಬಲಿ, ಎಳ್ಳು-ಬೆಲ್ಲದಂತೆ ಸಂಬಂಧಗಳು ಮಧುರವಾಗಲಿ ಎಂದು ಹಾರೈಸಿದರು.
ರಾಜಕೀಯ ವಿಚಾರಕ್ಕೆ ಬಂದಾಗ, ನಾವು ಎನ್‌ಡಿಎ ಮೈತ್ರಿಯ ಭಾಗವಾಗಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವುದು. ಇದು ನನ್ನ ವೈಯಕ್ತಿಕ ಆಸೆ ಮಾತ್ರವಲ್ಲ, ಜನತೆಯ ನಿರೀಕ್ಷೆಯೂ ಹೌದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಈಗ ನಡೆಯುತ್ತಿರುವ ಆಡಳಿತವನ್ನು ನಾನು ನಿರಂತರವಾಗಿ ಗಮನಿಸುತ್ತಿದ್ದೇನೆ. ಜನತೆ ನೆಮ್ಮದಿಯಿಂದ ಬದುಕುವಂತಹ ಸರ್ಕಾರ ಬರಬೇಕು ಎಂಬುದು ನನ್ನ ಆಶಯ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಎಂಬ ಮಾತುಗಳು ತಪ್ಪು ಕಲ್ಪನೆ. ನಾನು ರಾಜ್ಯ ರಾಜಕಾರಣದಲ್ಲಿ ಇದ್ದೇ ಇರುತ್ತೇನೆ. ಕೇಂದ್ರದಲ್ಲಿ ಪ್ರಧಾನಮಂತ್ರಿಗಳು ನನಗೆ ಎರಡು ಮಹತ್ವದ ಖಾತೆಗಳ ಜವಾಬ್ದಾರಿ ನೀಡಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ಆದರೆ ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂಬುದನ್ನು ಪರಿಸ್ಥಿತಿ ಮತ್ತು ಜನತೆಯ ಮನಸ್ಸು ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು.
ಈ ವೇಳೆ ಅವರು ರಾಜ್ಯ ಸರ್ಕಾರದ ಆಡಳಿತ ಶೈಲಿಯ ಮೇಲೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ಮೇಲೆ ಒತ್ತಡ ಮತ್ತು ದೌರ್ಜನ್ಯ ಹೆಚ್ಚಾಗಿದೆ. ಶಿಡ್ಲಘಟ್ಟದಲ್ಲಿ ನಡೆದ ಘಟನೆಯನ್ನು ಉದಾಹರಿಸಿದ ಅವರು, ಕಾಂಗ್ರೆಸ್ ಮುಖಂಡನೊಬ್ಬ ಅಧಿಕಾರಿಗೆ ಬೆದರಿಕೆ ಹಾಕಿರುವುದು ತುಂಬಾ ಬೇಸರ ತಂದಿದೆ ಎಂದರು. ಯಾವುದೇ ಪಕ್ಷದವರಾಗಲಿ, ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ. ಒಂದೆರಡು ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಿದರೆ ಉಳಿದವರಿಗೆ ಪಾಠವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಅಧಿಕಾರಿಗಳ ಮೇಲೆ ಅನಗತ್ಯ ಒತ್ತಡ ಹೇರಿ ಕಾನೂನುಬಾಹಿರ ಕೆಲಸ ಮಾಡಿಸುವ ಪ್ರವೃತ್ತಿ ಸರ್ಕಾರದಲ್ಲಿ ವ್ಯಾಪಕವಾಗಿದೆ ಎಂದು ಅವರು ಆರೋಪಿಸಿದರು. ಸರ್ಕಾರದ ನೇತೃತ್ವ ಸರಿಯಾಗಿಲ್ಲದಿದ್ದಾಗ ಇಂತಹ ಘಟನೆಗಳು ಹೆಚ್ಚಾಗುತ್ತವೆ. ಮೇಲಿನಿಂದ ಕೆಳಗಿನವರೆಗೂ ನಿಯಂತ್ರಣ ಇದ್ದರೆ ಮಾತ್ರ ವ್ಯವಸ್ಥೆ ಸರಿಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಅಧಿಕಾರಿಗಳಿಗೂ ಕಿವಿಮಾತು ಹೇಳಿದರು. ಬಡ್ತಿ ಅಥವಾ ಪೋಸ್ಟಿಂಗ್ ಆಸೆಗೆ ಬಿದ್ದು ಕಾನೂನು ಉಲ್ಲಂಘನೆ ಮಾಡಿದರೆ ಮುಂದೆ ಅದಕ್ಕೆ ಬೆಲೆ ತೀರಿಸಬೇಕಾಗುತ್ತದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಗ್ರಬರಹವನ್ನು ಉಲ್ಲೇಖಿಸಿದ ಅವರು, ವಿಕಾಸಸೌಧ ನಿರ್ಮಾಣದ ವೇಳೆ ನಡೆದ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಎಂಟು ವರ್ಷಗಳ ನಂತರ ಲೋಕಾಯುಕ್ತ ನೀಡಿದ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ ಎಂದರು. ಜನಪ್ರತಿನಿಧಿಗಳ ಒತ್ತಡಕ್ಕೆ ಒಳಗಾಗದೆ, ಸರ್ಕಾರದ ನಿಯಮಾವಳಿಯೊಳಗೆ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿದರೆ ಮಾತ್ರ ಅಧಿಕಾರಿಗಳಿಗೂ ಗೌರವ ಉಳಿಯುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
