
ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯ ಎಂದರೆ ಕಾಂಗ್ರೆಸ್‌ನೊಳಗಿನ ಅಧಿಕಾರ ಹಸ್ತಾಂತರದ ಗದ್ದಲ. ಮುಖ್ಯಮಂತ್ರಿ ಕುರ್ಚಿಯ ಸುತ್ತ ನಡೆಯುತ್ತಿರುವ ಈ ಅಘೋಷಿತ ಸಂಘರ್ಷ ಕೇವಲ ವ್ಯಕ್ತಿಗಳ ನಡುವಿನ ಪೈಪೋಟಿಯಲ್ಲ, ಅದು ಪಕ್ಷದ ಭವಿಷ್ಯ, ಆಡಳಿತದ ಸ್ಥಿರತೆ ಮತ್ತು ಹೈಕಮಾಂಡ್‌ನ ನಿಲುವಿನ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ತಿಂಗಳೊಂದಿಗೆ ತಿಂಗಳು ಕಳೆಯುತ್ತಿದ್ದರೂ ಸ್ಪಷ್ಟ ಉತ್ತರ ಸಿಗದ ಈ ಕುರ್ಚಿ ಕಾಳಗ ಇದೀಗ ಮತ್ತೊಂದು ಮಹತ್ವದ ತಿರುವಿನ ಅಂಚಿಗೆ ಬಂದು ನಿಂತಿದೆ.
ನವೆಂಬರ್ ಆರಂಭದಿಂದಲೇ ಕಾಂಗ್ರೆಸ್‌ನಲ್ಲಿ “ಕುರ್ಚಿ ರಾಜಕಾರಣ” ಜೋರಾಗಿದ್ದು, ಒಂದು ಕಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮಿಗೆ ನೀಡಲಾಗಿದ್ದ ಭರವಸೆಯನ್ನು ನೆನಪಿಸುತ್ತಿದ್ದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಣಯವೇ ಅಂತಿಮ ಎಂದು ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ. ಈ ಪರಸ್ಪರ ಹೇಳಿಕೆಗಳು ಕಾಂಗ್ರೆಸ್‌ನೊಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದರೆ, ಹೈಕಮಾಂಡ್‌ನ ಮೌನ ರಾಜಕೀಯ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಇಂತಹ ಸನ್ನಿವೇಶದಲ್ಲಿಯೇ, ಲೋಕಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ಪ್ರಮುಖ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವಯನಾಡು ಪ್ರವಾಸದ ಭಾಗವಾಗಿ ಮೈಸೂರಿಗೆ ಬರುವ ರಾಹುಲ್ ಗಾಂಧಿ, ಮಧ್ಯಾಹ್ನ 2:20ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ತೆರಳಲಿದ್ದಾರೆ. ಆದರೆ ಅದಕ್ಕೂ ಮುನ್ನ ನಡೆಯಲಿರುವ ಒಂದು ಮಹತ್ವದ ಬೆಳವಣಿಗೆ ಇದೀಗ ಎಲ್ಲರ ಗಮನ ಸೆಳೆದಿದೆ.
ರಾಹುಲ್ ಗಾಂಧಿ ಭೇಟಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯಾಹ್ನ 1:30ರ ಸುಮಾರಿಗೆ ಮೈಸೂರಿಗೆ ಆಗಮಿಸಲಿದ್ದು, ರಾಹುಲ್ ಗಾಂಧಿ ವಯನಾಡಿಗೆ ತೆರಳುವ ಮುನ್ನ ಮೂವರು ನಾಯಕರ ನಡುವೆ ಲಂಚ್ ಮೀಟಿಂಗ್ ನಡೆಯಲಿದೆ. ಸಾಮಾನ್ಯವಾಗಿ ಹೈಕಮಾಂಡ್ ನಾಯಕ ರಾಜ್ಯಕ್ಕೆ ಬಂದಾಗ ಸಿಎಂ–ಡಿಸಿಎಂ ಸ್ವಾಗತಿಸುವುದು ರಾಜಕೀಯ ರೂಢಿಯೇ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ವಿಚಾರ ಗಂಭೀರ ಚರ್ಚೆಗೆ ಕಾರಣವಾಗಿರುವ ಹೊತ್ತಿನಲ್ಲಿ ನಡೆಯುತ್ತಿರುವ ಈ ಲಂಚ್ ಮೀಟಿಂಗ್ ಸಹಜವಾಗಿಯೇ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ “ವರ್ಡ್ ಪವರ್ ಇಸ್ ವರ್ಲ್ಡ್ ಪವರ್” ಎಂದು ಪದೇಪದೇ ತಮ್ಮ ಮಾತಿನ ಬಲವನ್ನು ನೆನಪಿಸುತ್ತಿದ್ದರೆ, ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರವಾಗಲಿ ಅಥವಾ ಸಂಪುಟ ಪುನರ್ ರಚನೆಯೇ ಆಗಲಿ, ಎಲ್ಲವೂ ಹೈಕಮಾಂಡ್ ಸೂಚನೆಯಂತೆ ನಡೆಯಲಿದೆ ಎಂದು ಹೇಳುತ್ತಿದ್ದಾರೆ. ಈ ವಿರುದ್ಧ ನಿಲುವುಗಳ ನಡುವೆಯೇ, ರಾಹುಲ್ ಗಾಂಧಿ ಯಾವ ಸಂದೇಶ ನೀಡಲಿದ್ದಾರೆ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ.
ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಎಂಬ ಎಲ್ಲಾ ಊಹಾಪೋಹಗಳು ಠುಸ್ ಪಟಾಕಿಯಾಗಿ ಮುಗಿದ ಬಳಿಕ, ಇದೀಗ ಸಂಕ್ರಾಂತಿಯ ಶುಭ ಮುಹೂರ್ತದಲ್ಲಿ ಅಧಿಕಾರ ಹಸ್ತಾಂತರವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಸಮಯದಲ್ಲಿ ರಾಹುಲ್ ಗಾಂಧಿಯ ರಾಜ್ಯ ಪ್ರವೇಶ ಮತ್ತು ಸಿಎಂ–ಡಿಸಿಎಂ ಜೊತೆಗಿನ ಲಂಚ್ ಮೀಟಿಂಗ್ ನಡೆಯುತ್ತಿರುವುದು ರಾಜಕೀಯ ಲೆಕ್ಕಾಚಾರಕ್ಕೆ ಇನ್ನಷ್ಟು ಪುಷ್ಟಿ ತುಂಬಿದೆ.
ಇಂದಿನ ಈ ಭೇಟಿಯಲ್ಲೇ ಅಧಿಕಾರ ಹಸ್ತಾಂತರದ ಹೈಡ್ರಾಮಾಗೆ ರಾಹುಲ್ ಗಾಂಧಿ ಕ್ಲೈಮ್ಯಾಕ್ಸ್ ನೀಡಲಿದ್ದಾರಾ? ಅಥವಾ ಕನಿಷ್ಠ ಸಂಪುಟ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ಸಿಗಲಿದೆಯಾ? ಇಲ್ಲವೇ ಇದುವರೆಗೂ ಪಾಲಿಸಿಕೊಂಡು ಬಂದಿರುವಂತೆ, ಈ ವಿಷಯದಲ್ಲೂ ರಾಹುಲ್ ಗಾಂಧಿ ಮೌನವೇ ಅಸ್ತ್ರವಾಗಿ ಬಳಸಲಿದ್ದಾರಾ ಎಂಬ ಪ್ರಶ್ನೆಗಳು ರಾಜ್ಯ ರಾಜಕೀಯದಲ್ಲಿ ಮನೆ ಮಾಡಿವೆ.
ಇಲ್ಲಿಯವರೆಗೂ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಕುರಿತು ಹೈಕಮಾಂಡ್ ನಾಯಕರು, ಅದರಲ್ಲೂ ರಾಹುಲ್ ಗಾಂಧಿ ಸ್ಪಷ್ಟ ನಿಲುವು ತಾಳಿಲ್ಲ. ಇಂದು ಮೈಸೂರಿನಲ್ಲಿ ಈ ಎಲ್ಲಾ ಕುತೂಹಲಗಳಿಗೆ ಉತ್ತರ ಸಿಗುತ್ತದೆಯೇ, ಅಥವಾ ಮತ್ತೆ ‘ಅಡ್ಡಗೋಡೆಯ ಮೇಲಿನ ದೀಪ’ ಹಚ್ಚಿ ವಿಚಾರವನ್ನು ಮುಂದೂಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇಂದು ಮೈಸೂರಿನಲ್ಲಿ ನಡೆಯಲಿರುವ ಈ ಲಂಚ್ ಮೀಟಿಂಗ್ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಾಯಿಸಬಹುದೇ ಎಂಬ ಪ್ರಶ್ನೆಗೆ ಉತ್ತರ ಸಿಗುವ ಕ್ಷಣಕ್ಕೆ ಇಡೀ ಕರ್ನಾಟಕ ಕಣ್ಣಿಟ್ಟಿದೆ.
