
ಮಹಿಳಾ ಸುರಕ್ಷತೆ ವಿಚಾರದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿರುವುದು ನಗರಕ್ಕೆ ಮಾತ್ರವಲ್ಲ, ರಾಜ್ಯಕ್ಕೂ ಹೆಮ್ಮೆಯ ಸಂಗತಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಮಹಿಳೆಯರ ವಾಸಕ್ಕೆ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ ಎಂಬ ಸಮೀಕ್ಷೆ, ಪೊಲೀಸ್ ಇಲಾಖೆಯ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ತಕ್ಕ ಉತ್ತರವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.
ಚೆನ್ನೈ ಮೂಲದ ಅವತಾರ್ ಗ್ರೂಪ್ ನಡೆಸಿದ ಸಮೀಕ್ಷೆಯಲ್ಲಿ ಸುರಕ್ಷತೆ, ತಂತ್ರಜ್ಞಾನ ಬಳಕೆ, ಮೂಲಸೌಕರ್ಯ ಸೇರಿದಂತೆ ಹಲವು ಮಾನದಂಡಗಳ ಆಧಾರದಲ್ಲಿ ಬೆಂಗಳೂರು 53.29 ಅಂಕಗಳನ್ನು ಗಳಿಸಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಈ ಸಾಧನೆಗೆ ಕಾರಣರಾದ ಬೆಂಗಳೂರು ನಗರ ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಗಳಿಗೂ ಅಭಿನಂದನೆ ಸಲ್ಲಿಸಿದರು.
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದ ಅವರು, ತಾವೇ ಸ್ವತಃ ಬೆಂಗಳೂರು ನಗರ ಪೊಲೀಸ್ ಕಮಾಂಡ್ ಸೆಂಟರ್ಗೆ ತೆರಳಿ ರಾತ್ರಿ ಎರಡು ಗಂಟೆಯವರೆಗೂ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಿದ್ದಾಗಿ ವಿವರಿಸಿದರು. ಇಂತಹ ಜಾಗರೂಕತೆಯೇ ಬೆಂಗಳೂರನ್ನು ಮಹಿಳೆಯರಿಗೆ ಸುರಕ್ಷಿತ ನಗರವಾಗಿ ರೂಪಿಸಿದೆ ಎಂದರು.
ಈ ಹಿಂದೆ ಕೂಡ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲಿ ಉತ್ತಮ ಸ್ಥಾನ ಪಡೆದಿತ್ತು ಎಂದು ನೆನಪಿಸಿದ ಅವರು, ವಿರೋಧ ಪಕ್ಷಗಳು ದಿನನಿತ್ಯ ಬೆಂಗಳೂರಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿವೆ. ಆದರೆ ಈ ಸಮೀಕ್ಷಾ ವರದಿ ಅವರ ಆರೋಪಗಳಿಗೆ ಸ್ಪಷ್ಟ ಉತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.
ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕೊರಟಗೆರೆಯಲ್ಲಿ ನಡೆದ ಪೂಜೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರತಿಯೊಬ್ಬ ರಾಜಕಾರಣಿಗೂ ಬೆಂಬಲಿಗರು ಮತ್ತು ಅಭಿಮಾನಿಗಳು ಇರುತ್ತಾರೆ. ತಮ್ಮ ನಾಯಕ ಎತ್ತರಕ್ಕೆ ಹೋಗಬೇಕು ಎಂದು ಅವರು ಬಯಸುವುದು ಸಹಜ. ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಬಳ್ಳಾರಿ ಹಾಗೂ ಹುಬ್ಬಳ್ಳಿ ಪ್ರಕರಣಗಳನ್ನು ಸಿಐಡಿಗೆ ವಹಿಸಿರುವುದರ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಆದೇಶ ಹೊರಡಿಸಲಾಗಿದೆ. ನಾವು ಏನನ್ನಾದರೂ ಮುಚ್ಚಿಡುತ್ತಿದ್ದೇವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆಯ ನಂತರ ಸತ್ಯ ಎಲ್ಲರಿಗೂ ತಿಳಿಯಲಿದೆ ಎಂದು ಹೇಳಿದರು.
ಧ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಅಂಕಿತ ವಿಳಂಬವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ರಾಜ್ಯಪಾಲರು ಮಸೂದೆಯನ್ನು ಅಧ್ಯಯನ ಮಾಡುತ್ತಿದ್ದಾರೆ ಎನ್ನಿಸುತ್ತದೆ. ವಾಪಸ್ ಕಳಿಸಿ ಸ್ಪಷ್ಟನೆ ಕೇಳಿದರೆ ಸರ್ಕಾರ ನೀಡಲಿದೆ. ಒಂದುವೇಳೆ ತಿರಸ್ಕರಿಸಿದರೆ ಮುಂದಿನ ಕ್ರಮವನ್ನು ಸರ್ಕಾರ ತೀರ್ಮಾನಿಸಲಿದೆ ಎಂದು ತಿಳಿಸಿದರು.
ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಸರ್ಕಾರ ಕಠಿಣ ನಿಲುವು ಹೊಂದಿದೆ ಎಂದ ಅವರು, ಗಡಿಯಲ್ಲಿ ಹಣಕೊಟ್ಟು ಒಳನುಗ್ಗುತ್ತಿರುವ ಆರೋಪಗಳಿದ್ದರೆ ಕೇಂದ್ರ ಸರ್ಕಾರ ಗಡಿಭದ್ರತೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು. ಏಜೆಂಟ್ಗಳ ಮೂಲಕ ಅಕ್ರಮವಾಗಿ ಬಂದವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲಾಗುತ್ತಿದೆ. ವಿದೇಶಿಗರ ದಾಖಲೆಗಳನ್ನು ಪರಿಶೀಲಿಸುವುದು ಕಡ್ಡಾಯ. ಅಧಿಕೃತ ವೀಸಾ ಇಲ್ಲದವರಿಗೆ ಮನೆ ಬಾಡಿಗೆ ನೀಡಬಾರದು ಎಂಬ ಸೂಚನೆಗಳನ್ನು ನೀಡಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
