
ರಾಜಕೀಯ ಆರೋಪ–ಪ್ರತ್ಯಾರೋಪಗಳು ಹೊಸದಲ್ಲ. ಆದರೆ ಇತ್ತೀಚೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸೋಶಿಯಲ್ ಮೀಡಿಯಾ ಸಮರ ನೋಡಿದರೆ, ರಾಜಕೀಯ ಭಾಷೆ ಯಾವ ಮಟ್ಟಕ್ಕೆ ಇಳಿಯುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಎದ್ದು ಬರುತ್ತದೆ. ಬಳ್ಳಾರಿ ರೆಡ್ಡಿ ಬಣಗಳ ಶೂಟೌಟ್ ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ಆರಂಭವಾದ ಟ್ವೀಟ್ ಯುದ್ಧ, ವಿಷಯದ ಗಂಭೀರತೆಯನ್ನು ಮರೆಸಿ ವೈಯಕ್ತಿಕ ನಿಂದನೆ, ಕೆಳಮಟ್ಟದ ಪದಪ್ರಯೋಗ ಮತ್ತು ಅಸಭ್ಯ ಆರೋಪಗಳ ಕಡೆಗೆ ತಿರುಗಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗಳಿಂದ ಪ್ರಾರಂಭವಾದ ವಿವಾದಕ್ಕೆ ಕಾಂಗ್ರೆಸ್ ಐಟಿ ಸೆಲ್ ತೀವ್ರ ಪ್ರತಿಕ್ರಿಯೆ ನೀಡಿತು. ಆರೋಪಗಳಿಗೆ ಉತ್ತರಿಸುವ ಬದಲು ಬಳಸಿದ ಭಾಷೆ, ರಾಜಕೀಯ ಚರ್ಚೆಯ ಘನತೆಯನ್ನೇ ಪ್ರಶ್ನಿಸುವಂತಿತ್ತು. ‘ಪೇಪರ್ ಟೈಗರ್’, ‘ಅನುಭವದ ಕೊಚ್ಚೆ’ ಎನ್ನುವ ಪದಗಳಿಂದ ಹಿಡಿದು, ಅಧಿಕಾರಕ್ಕಾಗಿ ಯಾವ ಪಕ್ಷದ ಜತೆಯಾದರೂ ಕೈಜೋಡಿಸುವ ಸಮಯಸಾಧಕತನದ ಆರೋಪಗಳವರೆಗೂ ಮಾತಿನ ದಾಳಿ ನಡೆಯಿತು. ಬಳ್ಳಾರಿ ಪ್ರಕರಣದ ತನಿಖೆ, ಸತ್ಯಾಸತ್ಯತೆಗಳ ಬಗ್ಗೆ ಮಾತನಾಡಬೇಕಾದ ಜಾಗದಲ್ಲಿ, ವೈಯಕ್ತಿಕ ನಡವಳಿಕೆಗಳ ಬಗ್ಗೆ ವ್ಯಂಗ್ಯವೇ ಮುಂಚೂಣಿಗೆ ಬಂತು.
ಇದಕ್ಕೆ ಪ್ರತಿಯಾಗಿ ಜೆಡಿಎಸ್ ಐಟಿ ವಿಂಗ್ ಕೂಡ ತಗ್ಗಲಿಲ್ಲ. ಕಾಂಗ್ರೆಸ್ ನಾಯಕರ ವಿರುದ್ಧ ಹಳೆಯ ವಿವಾದಗಳು, ಸಿಡಿ ಪ್ರಕರಣಗಳು, ಹನಿಟ್ರಾಪ್ ಆರೋಪಗಳು, ರಿಯಲ್ ಎಸ್ಟೇಟ್ ವ್ಯವಹಾರಗಳ ಮಾತುಗಳನ್ನು ಎತ್ತಿ ಹಿಡಿದು ತಿರುಗೇಟು ನೀಡಿತು. ಇದು ರಾಜಕೀಯ ಪ್ರತಿಕ್ರಿಯೆಯೇ ಅಥವಾ ವೈಯಕ್ತಿಕ ದ್ವೇಷದ ಬಹಿರಂಗ ಪ್ರದರ್ಶನವೇ ಎಂಬ ಗೊಂದಲ ಜನರಲ್ಲಿ ಮೂಡಿತು.
ಇಷ್ಟರಲ್ಲೇ ಕಾಂಗ್ರೆಸ್ ಮತ್ತೆ ಕೌಂಟರ್ ಕೊಟ್ಟು, ಜೆಡಿಎಸ್‌ನ್ನು ‘ಬ್ಲೂ ಬಾಯ್ಸ್’ ಪಾರ್ಟಿ ಎಂದು ಕರೆದಿತು. ಹಾಸನ್ ಮೂಲದ ಅಶ್ಲೀಲ ವಿಡಿಯೋ ಪ್ರಕರಣಗಳನ್ನು ಉಲ್ಲೇಖಿಸಿ, ಜೆಡಿಎಸ್ ನಾಯಕರನ್ನು ನೇರವಾಗಿ ಗುರಿಯಾಗಿಸಿಕೊಂಡಿತು. ಈ ಹಂತಕ್ಕೆ ಬಂದಾಗ, ಬಳ್ಳಾರಿ ಶೂಟೌಟ್ ಪ್ರಕರಣವೇ ಹಿನ್ನೆಲೆಗೆ ಸರಿದು, ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅವಮಾನಿಸುವ ಸ್ಪರ್ಧೆಯೇ ಮುಖ್ಯ ವಿಷಯವಾಗಿ ಪರಿಣಮಿಸಿತು.
ಒಟ್ಟಿನಲ್ಲಿ, ಈ ಟ್ವೀಟ್ ಸಮರದಲ್ಲಿ ಸೋತಿದ್ದು ಯಾರೋ ಒಬ್ಬ ಪಕ್ಷವಲ್ಲ; ರಾಜಕೀಯ ಸಂಸ್ಕೃತಿಯೇ. ಜನಸಾಮಾನ್ಯರ ಸಮಸ್ಯೆಗಳು, ಕಾನೂನು–ಕ್ರಮ, ತನಿಖೆಯ ಪಾರದರ್ಶಕತೆ ಕುರಿತು ಮಾತನಾಡಬೇಕಾದ ನಾಯಕರು, ಅಸಭ್ಯ ಪದಗಳ ಮೂಲಕ ಪರಸ್ಪರ ಕಚ್ಚಾಡುತ್ತಿರುವ ದೃಶ್ಯ ರಾಜಕೀಯದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತಿದೆ. ಅಧಿಕಾರಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಷೆಯ ಮಿತಿಯನ್ನು ಮೀರಿ ಹೋಗುತ್ತಿರುವ ಈ ಪ್ರವೃತ್ತಿ, ‘ಇದು ರಾಜಕೀಯವೇ, ಅಥವಾ ಕೀಳು ಮಟ್ಟದ ಮನರಂಜನೆಯೇ?’ ಎಂಬ ಪ್ರಶ್ನೆಯನ್ನು ಸಾರ್ವಜನಿಕರ ಮುಂದೆ ನಿಲ್ಲಿಸಿದೆ.
