ಭಾರತ–ಅಮೆರಿಕ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ, ತಂತ್ರಜ್ಞಾನ ಮತ್ತು ರಾಜತಾಂತ್ರಿಕ ಸಹಕಾರದದಲ್ಲಿ ಹೊಸ ಎತ್ತರಕ್ಕೇರಿವೆ. ಇಂತಹ ಸಂದರ್ಭದಲ್ಲೇ, ಬಹುಕಾಲದಿಂದ ಚರ್ಚೆಯಲ್ಲಿದ್ದ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ನೀಡಿದ ಹೇಳಿಕೆ ಇದೀಗ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಗಳಿಗೆ ಭಾರತ ಸ್ಪಷ್ಟ ಮತ್ತು ದೃಢವಾದ ಪ್ರತಿಕ್ರಿಯೆ ನೀಡಿದ್ದು, ವಾಸ್ತವಾಂಶಗಳಿಂದ ದೂರಿರುವ ಹೇಳಿಕೆಗಳನ್ನು ತಿರಸ್ಕರಿಸಿದೆ.
ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ (Howard Lutnick) ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡದ ಕಾರಣ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ನಿಖರವಾಗಿಲ್ಲ ಎಂದು ಭಾರತ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಅವರು, ಲುಟ್ನಿಕ್ ಅವರ ಹೇಳಿಕೆಗಳನ್ನು ತಿರಸ್ಕರಿಸಿ, ಭಾರತವು ಯಾವಾಗಲೂ ಅಮೆರಿಕದೊಂದಿಗೆ ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದಕ್ಕೆ ಬದ್ಧವಾಗಿದೆ ಎಂದು ಹೇಳಿದರು. ಎರಡು ದೇಶಗಳ ನಡುವೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಉದ್ದೇಶದಿಂದ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಅವರು ವಿವರಿಸಿದರು.
ಭಾರತ ಮತ್ತು ಅಮೆರಿಕ ಎಂಬುದು ಎರಡು ಪೂರಕ ಆರ್ಥಿಕತೆಗಳಾಗಿದ್ದು, ಈ ಹಿನ್ನೆಲೆಯಲ್ಲೇ ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದಕ್ಕೆ ತಲುಪುವಲ್ಲಿ ಭಾರತ ಆಸಕ್ತಿ ಹೊಂದಿದೆ ಎಂದು ಜೈಸ್ವಾಲ್ ತಿಳಿಸಿದರು. ಈಗಾಗಲೇ ವಿವಿಧ ಹಂತಗಳಲ್ಲಿ ಹಲವು ವಿಷಯಗಳಲ್ಲಿ ಎರಡೂ ದೇಶಗಳು ಸಹಮತ ವ್ಯಕ್ತಪಡಿಸಿವೆ ಎಂದು ಅವರು ಹೇಳಿದರು.
ವ್ಯಾಪಾರ ಒಪ್ಪಂದವು ವೈಯಕ್ತಿಕ ದೂರವಾಣಿ ಕರೆಗಳ ಮೇಲೆ ಅವಲಂಬಿತವಲ್ಲ, ಬದಲಾಗಿ ಸಂಯೋಜಿತ ಮಾತುಕತೆ, ನೀತಿ ಸ್ಪಷ್ಟತೆ ಮತ್ತು ಪರಸ್ಪರ ಗೌರವದ ಮೇಲೆ ಆಧಾರಿತವಾಗಿರುತ್ತದೆ ಎಂಬ ಸಂದೇಶವನ್ನು ಭಾರತ ಈ ಮೂಲಕ ಸ್ಪಷ್ಟಪಡಿಸಿದೆ. ಭಾರತ–ಅಮೆರಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಭಾರತ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದೆ ಎಂದು MEA ಪುನರುಚ್ಚರಿಸಿದೆ.
