
ರಾಜಕೀಯದಲ್ಲಿ ಅಧಿಕಾರದ ಅವಧಿ, ಅನುಭವ ಮತ್ತು ನಿರಂತರತೆ ಎಂಬ ಅಂಶಗಳು ಆಡಳಿತದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಅಸ್ತಂಭಗಳು. ಇಂತಹ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೂರ್ಣಾವಧಿ ಆಡಳಿತದ ಕುರಿತ ಚರ್ಚೆಗೆ ಮತ್ತೊಂದು ಮಹತ್ವದ ಧ್ವನಿ ಸೇರ್ಪಡೆಗೊಂಡಿದೆ. ಬಸವತತ್ವ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಪಾದಿಸುವ ಕೂಡಲಸಂಗಮ ಬಸವಧರ್ಮ ಪೀಠದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಲವಾದ ಬೆಂಬಲ ವ್ಯಕ್ತವಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪೂರ್ಣಾವಧಿ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ ಎಂದು ಕೂಡಲಸಂಗಮ (Kudalasangama) ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ (Mate Gangadevi) ಸ್ಪಷ್ಟವಾಗಿ ಹೇಳಿದ್ದಾರೆ.
ಕೂಡಲಸಂಗಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆಡಳಿತ ಶೈಲಿಯನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಆಡಳಿತದೊಂದಿಗೆ ಹೋಲಿಕೆ ಮಾಡಿದರು. ಸಮಾಜದ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವಲ್ಲಿ ದೇವರಾಜ ಅರಸ್ ಹೇಗೆ ನಿಷ್ಠೆಯಿಂದ ಕೆಲಸ ಮಾಡಿದ್ದರೋ, ಅದೇ ರೀತಿಯ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಸಿದ್ದರಾಮಯ್ಯ ಅವರ ಆಡಳಿತದಲ್ಲೂ ಕಾಣಬಹುದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ತತ್ವಗಳ ಬಗ್ಗೆ ಅಪಾರ ಭಕ್ತಿ ಮತ್ತು ಗೌರವ ಹೊಂದಿದ್ದಾರೆ ಎಂದು ಹೇಳಿದ ಮಾತೆ ಗಂಗಾದೇವಿ, ತಮ್ಮ ಪ್ರತಿಯೊಂದು ಭಾಷಣದಲ್ಲೂ ಬಸವತತ್ವವನ್ನು ಅವರು ಉಲ್ಲೇಖಿಸುತ್ತಾರೆ ಎಂದು ತಿಳಿಸಿದರು. ಬಸವಣ್ಣನವರ ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಅವರು ಕೇವಲ ಮಾತಿನಲ್ಲಿ ಮಾತ್ರವಲ್ಲ, ತಮ್ಮ ಆಡಳಿತದ ನಡೆ-ನುಡಿಯಲ್ಲಿ ಸಹ ಅನುಸರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.
ಯಾರು ಮೇಲು, ಯಾರು ಕೆಳು ಎಂಬ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂಬ ಬಸವತತ್ವವನ್ನು ಸಿದ್ದರಾಮಯ್ಯ ಅವರು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಜನತೆಗೆ ಕೊಟ್ಟ ಮಾತಿಗೆ ಬದ್ಧರಾಗಿ ನಡೆದುಕೊಳ್ಳುತ್ತಿರುವ ಕಾರಣ ಅವರು ಪೂರ್ಣಾವಧಿ ಐದು ವರ್ಷಗಳ ಕಾಲ ಆಡಳಿತ ನಡೆಸಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ (DK Shivakumar) ಅವರ ಕುರಿತು ಮಾತನಾಡಿದ ಅವರು, ಶಿವಕುಮಾರ್ ಕೂಡ ಒಳ್ಳೆಯ ನಾಯಕರು ಹಾಗೂ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಇರುವ ಆಡಳಿತದ ಅಪಾರ ಅನುಭವ ರಾಜ್ಯಕ್ಕೆ ಅತ್ಯಂತ ಅಗತ್ಯವಾಗಿದ್ದು, ಆ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಂಡು ಅವರು ಮುಂದಿನ ಅವಧಿಯನ್ನೂ ಪೂರೈಸಬೇಕು ಎಂಬುದು ನಮ್ಮೆಲ್ಲರ ಅಭಿಲಾಷೆ ಎಂದು ಮಾತೆ ಗಂಗಾದೇವಿ ತಿಳಿಸಿದರು.
