
ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಖಜಾನೆಯಿಂದ, ಕಡಿಮೆ ಓದುಗರಿರುವ ರಾಷ್ಟ್ರೀಯ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ಹಣ ಹರಿದಿದೆ ಎಂಬ ಆರೋಪವನ್ನು ಬಿಜೆಪಿ ಮುಂದಿಟ್ಟಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾರ್ವಜನಿಕ ಹಣವನ್ನು ಹೇಗೆ, ಯಾರಿಗೆ ಮತ್ತು ಯಾವ ಮಾನದಂಡದ ಆಧಾರದಲ್ಲಿ ಬಳಸಬೇಕು ಎಂಬ ಪ್ರಶ್ನೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಜಾಹೀರಾತು ಬಜೆಟ್‌ನ ಪಾರದರ್ಶಕತೆ ಕುರಿತು ಹೊಸ ಸಂಶಯಗಳನ್ನು ಎಬ್ಬಿಸಿದೆ.
ಬಿಜೆಪಿ ಆರೋಪವೇನು?
ಬಿಜೆಪಿ ಆರೋಪಿಸಿದಂತೆ, ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಸಮಾನ ಪ್ರಮಾಣದ ಹಣ ನೀಡಲಾಗಿದೆ.
2023–24 ನೇ ಸಾಲಿನಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ₹1.90 ಕೋಟಿ ಜಾಹೀರಾತು
2024–25 ನೇ ಸಾಲಿನಲ್ಲಿ ಸುಮಾರು ₹99 ಲಕ್ಷ ಜಾಹೀರಾತು ಹಣ ನೀಡಲಾಗಿದೆ.
ಬಿಜೆಪಿ ಹೇಳುವ ಪ್ರಕಾರ, 2024–25 ರಲ್ಲಿ ರಾಜ್ಯ ಸರ್ಕಾರ ಎಲ್ಲಾ ರಾಷ್ಟ್ರೀಯ ಪತ್ರಿಕೆಗಳಿಗೆ ಒಟ್ಟು ₹1.42 ಕೋಟಿ ಖರ್ಚು ಮಾಡಿದ್ದರೆ, ಅದರಲ್ಲಿ ಶೇ.69ರಷ್ಟು ಹಣ ನ್ಯಾಷನಲ್ ಹೆರಾಲ್ಡ್‌ಗೆ ಮಾತ್ರ ನೀಡಲಾಗಿದೆ.
ಕಡಿಮೆ ಓದುಗರಿರುವ, ರಾಜ್ಯದಲ್ಲಿ ಅಥವಾ ದೆಹಲಿಯಲ್ಲಿ ಸರಿಯಾದ ವಿತರಣೆ ಇಲ್ಲದ ಪತ್ರಿಕೆಗೆ ಇಷ್ಟೊಂದು ಮೊತ್ತ ನೀಡಿರುವುದೇಕೆ? ಎಂಬುದೇ ಬಿಜೆಪಿ ಪ್ರಮುಖ ಪ್ರಶ್ನೆ.
ನ್ಯಾಷನಲ್ ಹೆರಾಲ್ಡ್ ಪ್ರೀತಿ – ಸಿದ್ದರಾಮಯ್ಯ ಸರ್ಕಾರದ ಮೇಲೆ ಚಾರ್ಜ್‌ಶೀಟ್:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಷನಲ್ ಹೆರಾಲ್ಡ್ ಮೇಲಿನ ವಿಶೇಷ ಪ್ರೀತಿ ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ಕೇವಲ ಜಾಹೀರಾತು ವಿಷಯವಲ್ಲ, ರಾಜಕೀಯ ಪ್ರೇರಿತ ನಿರ್ಧಾರ ಎಂಬ ಗಂಭೀರ ಆರೋಪವನ್ನೂ ಮಾಡಿದೆ.
ಇನ್ನು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತೀವ್ರವಾಗಿ ಪ್ರತಿಕ್ರಿಯಿಸಿ, ನ್ಯಾಷನಲ್ ಹೆರಾಲ್ಡ್ ಸ್ಕ್ಯಾಮ್‌ನಲ್ಲಿ ತಾಯಿ–ಮಗ ಬೇಲ್ ಮೇಲೆ ಇದ್ದಾರೆ. ಅಂಥ ಪತ್ರಿಕೆಗೆ ಕರ್ನಾಟಕ ಸರ್ಕಾರದ ದುಡ್ಡು ಕೊಡೋದು ಸಿದ್ದರಾಮಯ್ಯ ಸರ್ಕಾರದ ರಾಷ್ಟ್ರೀಯ ಬೌದ್ಧಿಕ ದಿವಾಳಿತನ ಎಂದು ಕಿಡಿಕಾರಿದ್ದಾರೆ.
ಇನ್ನು ಬಿಜೆಪಿ ನಾಯಕ ಅಶೋಕ್ ಕೂಡ ನ್ಯಾಷನಲ್ ಹೆರಾಲ್ಡ್ ಬೋಗಸ್ ಪತ್ರಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್–ಡಿಸಿಎಂ ಸಮರ್ಥನೆ ಏನು?
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಕ್ಕೆ ಜಾಹೀರಾತು ನೀಡುವ ಸಂಪೂರ್ಣ ಅಧಿಕಾರ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಸಚಿವ ಪ್ರಿಯಾಂಕ್ ಖರ್ಗೆ, ಇದು ಸಂಪೂರ್ಣವಾಗಿ ಕಾನೂನುಬದ್ಧ (ಲೀಗಲ್) ವಹಿವಾಟು ಎಂದು ಸ್ಪಷ್ಟಪಡಿಸಿದ್ದಾರೆ.
ಜಾಹೀರಾತು ಹಣ – ರಾಜಕೀಯ ವಿವಾದದ ಕೇಂದ್ರಬಿಂದು:
ಒಟ್ಟಾರೆ, ನ್ಯಾಷನಲ್ ಹೆರಾಲ್ಡ್‌ಗೆ ನೀಡಿದ ಜಾಹೀರಾತು ಹಣವು ಕೇವಲ ಆರ್ಥಿಕ ವಿಚಾರವಲ್ಲ, ಇದು ರಾಜಕೀಯ ನೈತಿಕತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹಣದ ಬಳಕೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ಆರೋಪ–ಪ್ರತ್ಯಾರೋಪಗಳು ಮುಂದಿನ ದಿನಗಳಲ್ಲಿ ರಾಜಕೀಯ ಮಟ್ಟದಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
