ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿದ್ದ ಫ್ಯಾನ್ಸ್ ವಾರ್‌ಗೆ ನಟ ಕಿಚ್ಚ ಸುದೀಪ್ ಸ್ವತಃ ತೆರೆ ಎಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಮಾತಿನ ಯುದ್ಧ, ಆರೋಪ ಪ್ರತ್ಯಾರೋಪಗಳ ನಡುವೆಯೇ ಸುದೀಪ್ ಮಾಡಿದ ಒಂದು ಸಾಲಿನ ಟ್ವೀಟ್ ಎಲ್ಲ ಗದ್ದಲಕ್ಕೂ ಬ್ರೇಕ್ ಹಾಕಿದೆ. ದರ್ಶನ್ ಬಗ್ಗೆ ಅವರು ವ್ಯಕ್ತಪಡಿಸಿದ ನಿಲುವು ಇದೀಗ ಅಭಿಮಾನಿಗಳ ನಡುವೆ ವೈರಲ್ ಆಗಿದೆ.
ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರಲಿದ್ದು, ಇದರ ಹಿನ್ನೆಲೆಯಲ್ಲಿ ನಡೆದ ಹುಬ್ಬಳ್ಳಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸುದೀಪ್ ‘ಯುದ್ಧಕ್ಕೆ ಸಿದ್ಧ’ ಎಂಬ ಮಾತು ಹೇಳಿದ್ದರು. ಈ ಮಾತು ಪೈರಸಿ ವಿರೋಧದ ಅಭಿಯಾನಕ್ಕೆ ಸಂಬಂಧಿಸಿದದ್ದು ಎಂದು ಅವರು ಸ್ಪಷ್ಟಪಡಿಸಿದ್ದರೂ, ಕೆಲವರು ಇದನ್ನು ದರ್ಶನ್ ವಿರುದ್ಧದ ಸಂದೇಶ ಎಂದು ಅರ್ಥ ಮಾಡಿಕೊಂಡರು. ಇದರಿಂದ ಇಬ್ಬರು ನಟರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ತೀವ್ರಗೊಂಡಿತು.
ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗಳನ್ನೂ ಕೆಲವರು ಪರೋಕ್ಷ ಟಾಂಗ್ ಎಂದುಕೊಂಡು ಚರ್ಚೆಗೆ ಎಳೆದರು. ಪರಿಣಾಮವಾಗಿ ಫ್ಯಾನ್ಸ್ ವಾರ್ ದಿನೇ ದಿನೇ ಹೆಚ್ಚುತ್ತಾ ಹೋಗಿತ್ತು. ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದು, ಅಲ್ಲೇ ಎಲ್ಲ ಗೊಂದಲಕ್ಕೂ ತೆರೆ ಬಿದ್ದಂತಾಯಿತು.
ಸೆಷನ್ ವೇಳೆ ಒಬ್ಬ ಅಭಿಮಾನಿ ಸುದೀಪ್ ಹಾಗೂ ದರ್ಶನ್ ಜೊತೆಗಿನ ಹಳೆಯ ಫೋಟೋವೊಂದನ್ನು ಹಂಚಿಕೊಂಡು, “ಇವರ ಬಗ್ಗೆ ಒಂದು ಮಾತು ಹೇಳಿ” ಎಂದು ಪ್ರಶ್ನೆ ಹಾಕಿದರು. ಇದಕ್ಕೆ ಸುದೀಪ್ ಯಾವುದೇ ತಿರುಗುಬಾಣವಿಲ್ಲದೆ, ಸರಳವಾಗಿ “ಅವರಿಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೀನಿ” ಎಂದು ಉತ್ತರಿಸಿದರು. ಈ ಒಂದು ಸಾಲಿನ ಪ್ರತಿಕ್ರಿಯೆ ಸಾಕಾಯಿತು, ಇಡೀ ವಿವಾದದ ತಾಪ ತಣ್ಣಗಾಗಲು.
ಕಿಚ್ಚ ಸುದೀಪ್ ಅವರ ಈ ನಿಲುವನ್ನು ಹಲವರು ಮೆಚ್ಚಿಕೊಂಡಿದ್ದು, ಸ್ಟಾರ್‌ಗಳ ನಡುವಿನ ಗೌರವ ಹಾಗೂ ಸ್ನೇಹವೇ ಮುಖ್ಯ ಎಂಬ ಸಂದೇಶ ಮತ್ತೊಮ್ಮೆ ಸಾಬೀತಾಗಿದೆ. ಫ್ಯಾನ್ಸ್ ನಡುವೆ ನಡೆಯುವ ಅನಗತ್ಯ ಸಂಘರ್ಷಕ್ಕೆ ಇಂತಹ ಹೇಳಿಕೆಗಳು ಬ್ರೇಕ್ ಹಾಕಬೇಕು ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.
