ರಾಯಚೂರು ಜಿಲ್ಲೆಯು ಸಾಮಾನ್ಯವಾಗಿ ಬಿಸಿಲಿನ ತಾಪಕ್ಕೆ ಹೆಸರುವಾಸಿಯಾಗಿರುವ ಪ್ರದೇಶ. ಆದರೆ ಈ ಬಾರಿ ಡಿಸೆಂಬರ್ ಚಳಿಯು ಅಚ್ಚರಿಯ ತಿರುವು ಪಡೆದು ಬಿಸಿಲುನಾಡಿನ ಜನರ ದಿನಚರಿಯನ್ನೇ ಬದಲಿಸುವ ಮಟ್ಟಿಗೆ ತಂಪಿನ ಹೊಡೆತ ನೀಡಿದೆ. ಉತ್ತರ ಭಾರತದ ವಾತಾವರಣವನ್ನೇ ನೆನಪಿಸುವಂತೆ, ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ಏಕಾಏಕಿ 9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಈ ಹಂಗಾಮಿನಲ್ಲೇ ದಾಖಲೆ ಮಟ್ಟದ ತಣ್ಣನೆ ವಾತಾವರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ತಂಪುಗಾಳಿಯ ಪರಿಣಾಮ, ರಾಯಚೂರಿನಲ್ಲಿ ಇನ್ನೂ ಐದು ದಿನಗಳವರೆಗೆ ಚಳಿಯ ಅಬ್ಬರ ಮುಂದುವರಿಯಲಿದೆ ಎಂಬ ಮುನ್ಸೂಚನೆ ಜನರಲ್ಲಿ ಆತಂಕಕ್ಕೂ ಎಚ್ಚರಕ್ಕೂ ಕಾರಣವಾಗಿದೆ.
ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದ್ದು, ಬೆಳಗಿನ ಜಾವ ಮತ್ತು ರಾತ್ರಿ ಸಮಯದಲ್ಲಿ ತಣ್ಣನೆಯ ಅನುಭವ ತೀವ್ರವಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ರಾಯಚೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆಯ ಸಾಧ್ಯತೆಯಿದ್ದು, ಗರಿಷ್ಠ ಉಷ್ಣಾಂಶ 28 ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 10 ರಿಂದ 7 ಡಿಗ್ರಿ ಸೆಲ್ಸಿಯಸ್ ನಡುವೆಯೇ ಇರಲಿದೆ ಎಂದು ತಿಳಿಸಿದೆ.
ಚಳಿಯ ಪರಿಣಾಮ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ರೈತರ ಕೃಷಿ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದೆ. ತೀವ್ರ ಚಳಿಯಿಂದಾಗಿ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ಅಗತ್ಯ ಪೋಷಕಾಂಶಗಳ ಸಿಂಪಡಣೆ ಮಾಡುವಂತೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ಇನ್ನು ಜನಸಾಮಾನ್ಯರ ಆರೋಗ್ಯದ ಮೇಲೂ ಚಳಿಯ ಪ್ರಭಾವ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವೈದ್ಯರು ಸಾರ್ವಜನಿಕರಿಗೆ ಬೆಳಗಿನ ಜಾವ ವಾಕಿಂಗ್ ಅನ್ನು ತಡವಾಗಿ ಆರಂಭಿಸುವಂತೆ ಸೂಚನೆ ನೀಡುತ್ತಿದ್ದು, ವಿಶೇಷವಾಗಿ ಚಿಕ್ಕಮಕ್ಕಳು ಹಾಗೂ ವೃದ್ಧರು ಹೆಚ್ಚು ಬೆಚ್ಚಗಿನ ಬಟ್ಟೆಗಳನ್ನು ಧರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ತೀವ್ರ ಚಳಿಯ ಸಂದರ್ಭದಲ್ಲಿ ಹೃದಯಾಘಾತ, ರಕ್ತದೊತ್ತಡದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ.
ಚಳಿಯ ತೀವ್ರತೆಯಿಂದಾಗಿ ಉದ್ಯಾನವನಗಳು ಹಾಗೂ ಕ್ರೀಡಾಂಗಣಗಳು ವಾಕಿಂಗ್‌ಗೆ ಬರುವ ಜನರಿಲ್ಲದೆ ಖಾಲಿ ಖಾಲಿಯಾಗಿ ಕಾಣಿಸುತ್ತಿವೆ. ತಣ್ಣನೆಯಿಂದ ತಪ್ಪಿಸಿಕೊಳ್ಳಲು ಜನರು ಅಲ್ಲಲ್ಲಿ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ಬಿಸಿಲುನಾಡು ರಾಯಚೂರು ಈ ಬಾರಿ ಸಂಪೂರ್ಣವಾಗಿ ಚಳಿಯ ಮಡಿಲಲ್ಲಿ ಸಿಲುಕಿರುವಂತಾಗಿದೆ.
