ಮುದ್ದೇಬಿಹಾಳ; ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಹಾಗೂ ನಾಗರಬೆಟ್ಟ ಏತ ನೀರಾವರಿ ಪೂರ್ಣಗೊಳಿಸಲು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುದ್ದೇಬಿಹಾಳ ಘಟಕ ಬೆಳಗಾವಿ ಚಲೋ ಇಂದು(ಮಂಗಳವಾರ) ಹಮ್ಮಿಕೊಳ್ಳಲಾಗಿದೆ.
ಮಂತ್ರಿಮಂಡಲದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.60ಮೀ. ದಿಂದ 524.256 ಮೀ ವರೆಗೆ ಹೆಚ್ಚಿಸುವ ಕಾಮಗಾರಿಗೆ ಕೂಡಲೆ ಟೆಂಡರ ಕರೆಯಬೇಕು. ಕೇಂದ್ರ ಸರಕಾರ ಕೂಡಲೇ ಆದೇಶ ಹೊರಡಿಸಿ ಹೆಚ್ಚುವರಿಯಾಗಿ ದೊರೆಯುವ 170 ಟಿ.ಎಮ್.ಸಿ. ನೀರನ್ನು ಯು.ಕೆ.ಪಿ. 3ನೇ ಹಂತಕ್ಕೆ ಬಳಸಿಕೊಳ್ಳಲು ಅಧಿಸೂಚಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಣೆಮಾಡಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ 2015ರಲ್ಲಿ ಮುಖ್ಯಮಂತ್ರಿಗಳು 1ಲಕ್ಷ ಕೋಟಿ ರೂ. ಅನುದಾನ ನೀಡಲು ಮಾತು ಕೊಟ್ಟಿದ್ದು, 1ಲಕ್ಷಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಲಮಟ್ಟಿ ಜಲಾಶಯದ ಅಡಿಯಲ್ಲಿ ಬರುವ 9 ಏತ ನೀರಾವರಿ ಯೋಜನೆಗಳನ್ನು ಕೂಡಲೇ ಟೆಂಡರ್ ಕರೆದು ಪೂರ್ಣಗೊಳಿಸಬೇಕು. ಜಲಾನಯನ ಪ್ರದೇಶದಲ್ಲಿ ಆರ್ಥಿಕ ಬೆಳೆಗಳನ್ನು ಬೆಳೆಯಲು ಸರಕಾರ ಆದೇಶ ಮಾಡಬೇಕು ಎಂದು ರೈತ ಸಂಘದ ಬೇಡಿಕೆಯಲ್ಲಿ ಹೇಳಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಕಛೇರಿಯು ಆಲಮಟ್ಟಿಯಲ್ಲಿ ನೆಪ ಮಾತ್ರಕ್ಕೆ ಇದ್ದು, ಕೂಡಲೇ ಬೆಂಗಳೂರಿನಲ್ಲಿರುವ ವ್ಯವಸ್ಥಾಪಕ ನಿರ್ದೆಶಕರ ಕಛೇರಿಯನ್ನು ರದ್ದುಗೊಳಿಸಿ ಆಲಮಟ್ಟಿಯಲ್ಲೇ ಮುಂದುವರೆಸಬೇಕು. ಕಳೆದ ವರ್ಷದ ಮತ್ತು ಈ ವರ್ಷದ ನೀರಾವರಿ ಸಲಹಾ ಸಮೀತಿ ಸಭೆಗಳನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. ಇದು ರೈತ ವಿರೋಧಿ ನೀತಿ, ಮುಂಬರುವ ಎಲ್ಲ ನೀರಾವರಿ ಸಲಹಾ ಸಮಿತಿ ಸಭೆಗಳನ್ನು ಆಲಮಟ್ಟಿಯಲ್ಲಿ ಜರುಗಿಸಬೇಕು. ಸಭೆಗೆ ಕಡ್ಡಾಯವಾಗಿ 5 ಜನ ರೈತ ಮುಂಖಡರನ್ನು ಪಕ್ಷಾತೀತವಾಗಿ ಆಹ್ವಾನ ನೀಡಬೇಕು.
ಇನ್ನು ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡು 8 ವರ್ಷ ಕಳೆದಿದೆ. ಪಂಪಸೆಟ್ ಪ್ರಾರಂಭ ಸ್ಥಿತಿಯಲ್ಲಿದೆ. ಸುಮಾರು 5 ವರ್ಷದಿಂದ ತಿಂಗಳಿಗೆ 24 ಲಕ್ಷ ರೂ. ಗಳನ್ನು ಕೆ.ಇ.ಬಿ.ಗೆ ಸರಕಾರ ಕನಿಷ್ಠ ಹಣ ತುಂಬುತ್ತಿದೆ. ಆದರೆ 5 ವರ್ಷದಿಂದ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ, ರೈತರ ಹೊಲಗಳಿಗೆ ಸುಮಾರ 5 ವರ್ಷದಿಂದ ನೀರು ಹರಿದಿಲ್ಲ. ಕಾಮಗಾರಿ ವಿಳಂಬ ವಾಗಿದ್ದಕ್ಕೆ ಸಂಬಂದಪಟ್ಟ ಅಧಿಕಾರಿಗಳಮೇಲೆ ಕ್ರಮ ಜರುಗಿಸಬೇಕು, ಹಾಗೂ ಕೂಡಲೆ ರೈತರ ಹೊಲಗಳಿಗೆ ಹೊಲಗಾಲುವೆಗಳೆಗೆ ಶೀಘ್ರ ಟೆಂಡರ ಕರೆದು ನೀರು ಹರಿಸಬೇಕು. ಈ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಹರಿಸಬೇಕು ಎಂದು ಈ ಬೆಳಗಾವಿ ಚಲೋದಲ್ಲಿ ಧ್ವನಿ ಮೊಳಗಲಿದೆ ಎಂದು ಮುದ್ದೇಬಿಹಾಳ ಹಸಿರು ಸೇನೆ ರೈತ ಸಂಘ ಹೇಳಿದೆ.
