ಜೈಪುರ : ರಾಜಸ್ಥಾನದ ಹೃದಯಭಾಗವಾದ ಜೈಪುರದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯೊಂದು ನೂರಾರು ಕಣ್ಣೀರನ್ನು ತರಿಸಿದೆ. ಮದ್ಯದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡ ಡಂಪರ್ ಟ್ರಕ್ ಚಾಲಕನೊಬ್ಬ, ಬರೋಬ್ಬರಿ ಐದು ಕಿಲೋಮೀಟರ್ ದೂರವರೆಗೆ ಅಬ್ಬರಿಸಿದ ಪರಿಣಾಮ, 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಐವತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಜೀವ–ಮರಣ ಹೋರಾಟ ನಡೆಸುತ್ತಿದ್ದಾರೆ.
ಲೋಹಮಂಡಿ ರಸ್ತೆಯೆಂಬ ಜೈಪುರದ ಬ್ಯುಸಿ ಮಾರ್ಗದಲ್ಲಿ ಈ ಭೀಕರ ಸರಣಿ ಅಪಘಾತ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಚಾಲಕ ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿ ಬಂದಿದ್ದ. ಒಂದು ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲುವ ಬದಲು, ನೇರವಾಗಿ ಇನ್ನೊಂದು ಗಾಡಿಗೆ ಅಪ್ಪಳಿಸುತ್ತಾ ಮುಂದುವರಿದ. ಕೆಲವೇ ಕ್ಷಣಗಳಲ್ಲಿ ರಸ್ತೆ ನರಮೇಧಕ್ಕೆ ಕಣವಾಗಿತ್ತು, ಕಾರುಗಳ ಅವಶೇಷಗಳು, ಬೈಕ್‌ಗಳ ತುಂಡುಗಳು, ಚೂರುಚೂರು ಗಾಜುಗಳು, ರಕ್ತದ ಗುರುತುಗಳು ಎಲ್ಲೆಡೆ ಅಳಲು ಮತ್ತು ಆಕ್ರಂದನದ ವಾತಾವರಣ ಸೃಷ್ಟಿಯಾಯಿತು.
ಆಘಾತಕಾರಿ ದೃಶ್ಯವನ್ನು ಕಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಕೆಲವು ನಿಮಿಷಗಳಲ್ಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ, ನಜ್ಜುಗುಜ್ಜಾದ ವಾಹನಗಳಡಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಅನೇಕರ ಜೀವ ಉಳಿಯಲಿಲ್ಲ. “ಆ ಟ್ರಕ್ ನಿಲ್ಲುತ್ತಿಲ್ಲವೆಂದು ಎಲ್ಲರೂ ಕಿರುಚುತ್ತಿದ್ದೆವು. ಆದರೆ ಚಾಲಕನಿಗೆ ಬುದ್ಧಿಯೇ ಇರಲಿಲ್ಲ” ಎಂದು ಒಬ್ಬ ಪ್ರತ್ಯಕ್ಷದರ್ಶಿ ಕಣ್ಣೀರು ತಡೆದುಕೊಂಡು ಹೇಳಿದ್ದಾನೆ.
ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಅವನು ತೀವ್ರ ಮದ್ಯಪಾನ ಮಾಡಿದ್ದನೆಂಬುದು ದೃಢಪಟ್ಟಿದೆ. ವೈದ್ಯಕೀಯ ವರದಿ ಕೂಡ ಅದನ್ನೇ ದೃಢಪಡಿಸುತ್ತಿದೆ. ಈ ಘಟನೆಯ ನಂತರ ಜೈಪುರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, “ಕುಡಿದ ಚಾಲಕರಿಗೆ ಕಟ್ಟುನಿಟ್ಟಿನ ಶಿಕ್ಷೆ ಕೊಡಬೇಕು” ಎಂಬ ಬೇಡಿಕೆ ಕೇಳಿ ಬಂದಿದೆ.
ಈ ದುರ್ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. “ಜೈಪುರದಲ್ಲಿ ಸಂಭವಿಸಿದ ಈ ದುರಂತದಿಂದ ನನಗೆ ತೀವ್ರ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ. ಜೊತೆಗೆ ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರವನ್ನು ಘೋಷಿಸಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಸಹ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಸಂತ್ರಸ್ತರಿಗೆ ತಕ್ಷಣದ ನೆರವು ನೀಡಲು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಬಲಪಡಿಸಲು ಸೂಚನೆ ನೀಡಿದ್ದಾರೆ.
