ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. “ರಸ್ತೆ, ಬೀದಿ ಎಲ್ಲ ಕಡೆ ಕ್ಯಾಮೆರಾ ಹಾಕ್ತಿದ್ದೇವೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ್ರೆ, ಆ ದೃಶ್ಯ ನೋಡಿ ಅವರ ಮನೆ ಮುಂದೆ ಕಸ ತಂದು ಹಾಕ್ತೀನಿ!” ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸದ ಬಗ್ಗೆ ನಿರಂತರ ಟೀಕೆ ಮಾಡುತ್ತಿರುವ ನಾಗರಿಕರು ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿ ಮಾತನಾಡಿದರು. “ಈ ಸಮಸ್ಯೆ ಬೆಂಗಳೂರು ಮಾತ್ರದಲ್ಲ, ಇನ್ನೂ ಅನೇಕ ನಗರಗಳಲ್ಲಿ ಇದೆ. ಆದ್ರೆ ಮಾಧ್ಯಮಗಳು ಇಲ್ಲಿ ಮಾತ್ರ ಹೆಚ್ಚು ತೋರಿಸ್ತಾರೆ. ಈಗ ಇದಕ್ಕೆ ಸ್ಪಷ್ಟ ಪರಿಹಾರ ಕೊಡ್ತಿದ್ದೀವಿ ನಗರಪಾಲಿಕೆಯಿಂದ ಹೊಸ ಕ್ಯಾಮೆರಾ ಜಾಲ ಹಾಕಲಾಗುತ್ತದೆ. ಯಾರೂ ಸಹ ರಸ್ತೆ, ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಿಗೆ ಕಸ ಹಾಕಬಾರದು” ಎಂದು ಹೇಳಿದರು.
ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದ ಘಟನೆ ಒಂದನ್ನು ಹಂಚಿಕೊಂಡು, “ಅಲ್ಲೂ ಕೆಲವರು ರಸ್ತೆಗೆ ಕಸ ಹಾಕಿದ್ದರು, ನಾವು ಹಿಂಬಾಲಿಸಿ ಅವರ ಮನೆ ಮುಂದೆಯೇ ಕಸ ಬಿಟ್ಟು ಬಂದಿದ್ದೇವೆ” ಎಂದು ಉದಾಹರಣೆ ನೀಡಿದ್ದಾರೆ. “ಕಸವನ್ನು ವಾಹನಗಳಲ್ಲಿ ಹಾಕಿ ಬೇರೆಡೆ ಬಿಸಾಡುವ ಏಜೆಂಟರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.
ಡಿಕೆಶಿ ನಾಗರಿಕರಿಗೆ ಕರೆ ನೀಡಿ, “ಪ್ರತಿ ಮನೆಯಲ್ಲೂ ಕಸದ ಡಬ್ಬಿ ಇಡಿ. ನಮ್ಮ ವಾಹನ ಮನೆ ಮನೆಗೆ ಬರುತ್ತದೆ, ಕಸವನ್ನು ಅದಕ್ಕೆ ನೀಡಿ. ಚಿತ್ರ ತೆಗೆದು ಟೀಕೆ ಮಾಡುವುದಕ್ಕಿಂತ ಸ್ವಚ್ಛತೆಗೆ ಸಹಕರಿಸಿ” ಎಂದು ಮನವಿ ಮಾಡಿದರು.
ಕಾಂಟ್ರ್ಯಾಕ್ಟರ್ ಮಾದರಿ ನಿರ್ವಹಣೆ ನಗರದ ಮುಖ್ಯರಸ್ತೆಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಸದ ನಿರ್ವಹಣೆ ಕಾಂಟ್ರ್ಯಾಕ್ಟರ್‌ಗಳಿಗೆ ಹಸ್ತಾಂತರಿಸುವ ಆಲೋಚನೆಯೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರರೆ. ಸ್ವಚ್ಛ ನಗರ ನಿರ್ಮಾಣಕ್ಕಾಗಿ ಕಠಿಣ ಕ್ರಮ ಕೈಗೆತ್ತಿಕೊಳ್ಳಲಿರುವುದಾಗಿ ಡಿಕೆಶಿ ಹೇಳಿದ್ದು, “ನಿಯಮ ಉಲ್ಲಂಘನೆ ಮಾಡಿದರೆ ಯಾರನ್ನೂ ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.
