ಸತ್ಯಕಾಮ ವಾರ್ತೆ ವಿಜಯನಗರ:
ವಿಜಯನಗರದ ಕೂಡ್ಲಿಗಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸಾರಿಗೆ ಸಚಿವ ಜಮೀರ್ ಅಹಮದ್ ಖಾನ್ ಮಾಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೇರ ಲಾಭವಾಗುತ್ತಿದ್ದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಕಷ್ಟವಾಗುತ್ತಿದೆ ಎಂಬ ಮಾತುಗಳನ್ನು ಈಗ ಸಚಿವರೇ ಬಾಯ್ಬಿಟ್ಟಿದ್ದಾರೆ.
ಸಭೆಯಲ್ಲಿ ಮಾತನಾಡಿದ ಜಮೀರ್ ಅಹಮದ್ ಖಾನ್ ಅವರು, ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹55 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿವರೆಗೆ ಅನುದಾನ ಬೇಕಾಗುತ್ತದೆ ಎಂದರು. ಈ ಮಹತ್ತರ ಮೊತ್ತವನ್ನು ಪೂರೈಸುವಲ್ಲಿ ಸರ್ಕಾರಕ್ಕೆ ಬರುವ ಒತ್ತಡವೇ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ, ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸರನ್ನು ಹೊಗಳಿದ ಸಚಿವರು, “ನಮ್ಮ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ ಯಾವ ಮಟ್ಟಕ್ಕೂ ಹೋಗ್ತಾರೆ. ಅನುದಾನಕ್ಕಾಗಿ ಕಾಲಿಗೆ ಬಿದ್ದು ಕೇಳ್ತಾರೆ. ಅಣ್ಣ, ನಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸ್ಬೇಕು ಅಂತ ಮನವಿ ಮಾಡ್ತಾರೆ” ಎಂದು ಹೇಳಿದರು. ಆದರೆ ಇದೇ ಮಾತಿನ ಮಧ್ಯೆ ಗ್ಯಾರಂಟಿ ಯೋಜನೆಗಳಿಂದ ಅನುದಾನ ತಡೆಯಾಗುತ್ತಿದೆ ಎಂಬ ಅಂಶವನ್ನೂ ಅವರು ಅನಿವಾರ್ಯವಾಗಿ ಒಪ್ಪಿಕೊಂಡರು.
ಸಚಿವರ ಈ ಹೇಳಿಕೆ, ವಿಪಕ್ಷಗಳು ಹಲವು ದಿನಗಳಿಂದ ಮಾಡುತ್ತಿದ್ದ “ಗ್ಯಾರಂಟಿ ಯೋಜನೆಗಳ ಭಾರದಿಂದ ರಾಜ್ಯದ ಖಜಾನೆ ಬತ್ತಿದೆ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ” ಎಂಬ ಆರೋಪಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಪಟುತೆ ಕುರಿತು ನಡೆಯುತ್ತಿದ್ದ ವಾದ ವಿವಾದಕ್ಕೆ ಇದೀಗ ಸರ್ಕಾರದ ಮಂತ್ರಿಯೇ ಬಲಪಡೆಯುವಂತಹ ಹೇಳಿಕೆ ಕೊಟ್ಟಿರುವುದು ವಿಶೇಷ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಜನಸಾಮಾನ್ಯರಲ್ಲಿ ಯೋಜನೆಗಳು ಜನಪ್ರಿಯವಾದರೂ, ಆಡಳಿತಾತ್ಮಕವಾಗಿ ಹಾಗೂ ಹಣಕಾಸು ನಿರ್ವಹಣೆಯ ದೃಷ್ಟಿಯಿಂದ ಹೊಸ ಸವಾಲುಗಳು ಎದುರಾದಂತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ರಾಜ್ಯದ ಅಭಿವೃದ್ಧಿ ಗತಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಅನ್ನುವುದನ್ನು ಕಾದು ನೋಡಬೇಕಿದೆ.
