ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ತುಣುಕಿನಿಂದ ಕಾಡಿನ ಕಳ್ಳ ವೀರಪ್ಪನ್ ಅವರ ಪುತ್ರಿಯರು ಮತ್ತೆ ಸುದ್ದಿಯಲ್ಲಿದ್ದಾರೆ. ಅಂಕಣಕಾರ ಶ್ರೀಕಂಠ ಬಾಳಗಂಚಿ ನೀಡಿರುವ ಸಂದರ್ಶನದ ಒಂದು ಭಾಗದಲ್ಲಿ ಅವರು “ವೀರಪ್ಪನ್ ಸತ್ತ ನಂತರ ಆರ್‌ಎಸ್ ಎಸ್ ಸಂಸ್ಥೆ ಅವರ ಮಗಳನ್ನು ಶಿಕ್ಷಣದ ದಾರಿಗೆ ತಂದಿತು. ಇಂದು ಅವರು ವಕೀಲೆಯಾಗಿ ಸಮಾಜಕ್ಕೆ ಸೇವೆ ಮಾಡುತ್ತಿದ್ದಾರೆ” ಎಂದು ಹೇಳಿರುವುದು ಜನರ ಗಮನ ಸೆಳೆದಿದೆ.
ಈ ವಿಡಿಯೋ ಪ್ರಸಾರವಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವೀರಪ್ಪನ್ ಪುತ್ರಿಯರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಕುತೂಹಲ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದು.
ವೀರಪ್ಪನ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ವಿದ್ಯಾರಾಣಿ ಮತ್ತು ಪ್ರಭಾರಾಣಿ. ತಂದೆಯ ಸಾವಿನ ನಂತರ ಇಬ್ಬರ ಬದುಕು ಸಂಪೂರ್ಣ ಬದಲಾಗಿದೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಈ ಇಬ್ಬರು ಮಗಳುಗಳು ಜೀವನದ ನೂರಾರು ಕಠಿಣ ಹಾದಿಗಳನ್ನು ಎದುರಿಸಿ ತಮ್ಮದೇ ದಾರಿಯಲ್ಲಿ ಮುಂದುವರಿದಿದ್ದಾರೆ.
ವಿದ್ಯಾರಾಣಿಯವರು ವಾರಾಣಸಿಯಲ್ಲಿರುವ ಆರ್‌ಎಸ್ಸೆಸ್‌ನ ಕಲ್ಯಾಣ ಆಶ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಬೆಂಗಳೂರಿನ ಕಾಲೇಜಿಲ್ಲಿ ಕಾನೂನು ಪದವಿ ಪೂರ್ಣಗೊಳಿಸಿ ವಕೀಲೆಯಾದರು. 2024ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಅವರು ಈಗ ಕೃಷ್ಣಗಿರಿಯಲ್ಲೇ ನೆಲೆಸಿ ವಕೀಲೆಯಾಗಿ ಮತ್ತು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದ ಸ್ಟೇಟ್ಸ್‌ಮನ್ ವರದಿ ಪ್ರಕಾರ, ವಿದ್ಯಾರಾಣಿ ದಲಿತ ಕ್ರೈಸ್ತ ಯುವಕನನ್ನು ಮದುವೆಯಾಗಿದ್ದು, ಸ್ಥಳೀಯವಾಗಿ ಶಾಲೆ ನಡೆಸುತ್ತಿದ್ದಾರೆ.
ತಂದೆಯ ದುಷ್ಕೀರ್ತಿ ಹಿನ್ನಲೆಯಲ್ಲಿ ಸಮಾಜದಿಂದ ದೂರವಿದ್ದ ಅವರು, ಶಿಕ್ಷಣ ಮತ್ತು ಸೇವೆಯ ಮೂಲಕ ಹೊಸ ಗುರುತನ್ನು ಗಳಿಸಿದ್ದಾರೆ. ವಿದ್ಯಾರಾಣಿ ಹಿಂದೆ ಬಿಜೆಪಿಗೆ ಸೇರಿದ್ದರು. ನಂತರ 2024ರ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷ ತೊರೆದು ನಾಮ್ ತಮಿಳರ್ ಕಚ್ಚಿ ಪಕ್ಷದ ಟಿಕೆಟ್‌ನಿಂದ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಆ ಚುನಾವಣೆಯಲ್ಲಿ ಸೋಲು ಕಂಡರು.
ವೀರಪ್ಪನ್ ಅವರ ಕಿರಿಯ ಮಗಳು ಪ್ರಭಾರಾಣಿ ತಂದೆ ಮೃತಪಟ್ಟಾಗ ಕೇವಲ 11 ವರ್ಷದವಳು. ಆಕೆಯ ಶಿಕ್ಷಣದ ಜವಾಬ್ದಾರಿಯನ್ನು ಚೆನ್ನೈನ ವಕೀಲರೊಬ್ಬರು ಹೊತ್ತಿದ್ದರು. ಪ್ರಭಾರಾಣಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಆಕೆಯ ಪ್ರಸ್ತುತ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ವೀರಪ್ಪನ್ ಪುತ್ರಿಯರು ತಂದೆಯ ನೆರಳಿನಿಂದ ದೂರವಾಗಿ, ಶಿಕ್ಷಣ, ಗೌರವ ಮತ್ತು ಸಮಾಜಸೇವೆಯ ಜೀವನ ಕಟ್ಟಿಕೊಂಡಿದ್ದಾರೆ. ಅರಣ್ಯದಲ್ಲಿ ಹುಟ್ಟಿ ಬದುಕಿದ ತಂದೆಯ ಮಕ್ಕಳು ಇಂದಿನ ದಿನಗಳಲ್ಲಿ ಶಿಕ್ಷಣದ ಬೆಳಕಿನ ಮೂಲಕ ಹೊಸ ಜೀವನ ಕಟ್ಟಿಕೊಂಡಿರುವುದು ಮನಮುಟ್ಟುವ ಸಂಗತಿ.
