ಸತ್ಯಕಾಮ ವಾರ್ತೆ ಮುದ್ದೇಬಿಹಾಳ;
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರು ಸಿ.ಎಸ್ ನಾಡಗೌಡ ಅವರಿಗೆ ಬರುವ ಪುನರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೇಳಬಾರದು ಎಂದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಗಾಗಿ ನಾಡಗೌಡರಿಗೆ ಈಗ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ ಎಂಬ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಹೇಳಿಕೆಗೆ ತೀಕ್ಷ್ಣವಾಗಿ ಶಾಸಕ ಸಿ.ಎಸ್ ನಾಡಗೌಡ ಅವರು ತಿರುಗೇಟು ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ್, ಎಂ.ಬಿ ಪಾಟೀಲ್ ಅವರಿಗಾಗಲಿ ಎಲ್ಲಿಯೂ ನಾನು ಸಚಿವ ಸ್ಥಾನ ನೀಡಬೇಡಿ, ನೀಡಬೇಕು ಎಂಬ ಲಾಭಿ ಮಾಡಿಲ್ಲ. ಜಿಲ್ಲೆಯಲ್ಲಿ 1981 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿದ್ದೇನೆ. ಜಿಲ್ಲೆಯಲ್ಲಿ ಹಿರಿಯ ಶಾಸಕ ಹೀಗಾಗಿ ನನ್ನ ಮೀಸಲಾತಿಯಲ್ಲಿ ಸಚಿವ ಸ್ಥಾನ ಕೇಳುತ್ತಿದ್ದೆನೆ. ನೀವು ಸಹ ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸಿ ಇದಕ್ಕೆ ನನ್ನದು ಯಾವುದೇ ತಕರಾರಿಲ್ಲ ಎಂದರು.
ಯಶವಂತರಾಯಗೌಡ ಅವರನ್ನು ನನ್ನ ಸ್ವಂತ ಸಹೋದರ ರೀತಿ ಇಷ್ಟು ದಿನ ಕಂಡಿದ್ದೆ, ಈಗಲೂ ಸಹ ಅದೇ ಭಾವನೆವಿದೆ. ಅದೇ ಆತ್ಮೀಯತೆವಿದೆ. ಯಾವ ದೃಷ್ಟಿಯಿಂದ ಈ ರೀತಿ ಇಂಡಿ ಶಾಸಕರು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಪಕ್ಷಕ್ಕೆ ಇಟ್ಟಿರುವ ನಿಷ್ಠೆ, ಪಕ್ಷಕ್ಕೆ ಸಲ್ಲಿಸಿದ ಸೇವೆ ಹಿನ್ನಲೆಯಲ್ಲಿ ಪಕ್ಷ ನನ್ನನ್ನು ಗುರುತಿಸಬೇಕೆಂದು ಬೇಡಿಕೆ ಇಟ್ಟಿದ್ದೇನೆ. ಯಾವುದೇ ವ್ಯಕ್ತಿಗಾಗಲಿ ಸಚಿವ ಸ್ಥಾನ ನೀಡಬೇಡಿ, ನೀಡಬೇಕು ಎಂಬ ಹೇಳಿಕೆ ಹೈಕಮಾಂಡ್ ಮಟ್ಟದಲ್ಲಿ ಆಗಲಿ ಮಾಧ್ಯಮಗಳಲ್ಲಿಯಾಗಲಿ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಶಾಸಕ ಸಿ.ಎಸ್ ನಾಡಗೌಡ ಸ್ಪಷ್ಟಪಡಿಸಿದರು.
ಯಶವಂತರಾಯಗೌಡ ಅವರು ಸಚಿವ ಸ್ಥಾನಕ್ಕಾಗಿ ನಿಮ್ಮ ಪ್ರಯತ್ನ ನೀವು ಮಾಡಿ, ಇದಕ್ಕೆ ಅಡ್ಡಿ ಮಾಡಲ್ಲ. ಜಯಗಳಿಸಿದ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಒಗ್ಗೂಡಿ ಹೈಕಮಾಂಡ್ ಹತ್ತಿರ ಹೋಗೋಣ, ಯಾವ ವ್ಯಕ್ತಿಯನ್ನಾಗಲಿ ಸಚಿವ ಸ್ಥಾನ ನೀಡಿ ಎಂದೇಳಿ ಬರೋಣ, ಆಗ ಹೈಕಮಾಂಡ್ ಮಾಡಿದ ಮಂತ್ರಿ ಸ್ಥಾನಗಳಿಗೆ ನನ್ನ ಸಹಮತವಿದೆ.
ಇನ್ನು ಸಿ.ಎಸ್. ನಾಡಗೌಡರು ಈಗಾಗಲೇ ಎರಡು ಬಾರಿ ಸಚಿವರಾಗಿದ್ದಾರೆ. ಅಲ್ಲದೇ ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಈಗ ಸಚಿವ ಸ್ಥಾನ ಕೇಳುವುದರಲ್ಲಿ ಅರ್ಥವಿಲ್ಲ ಎಂಬ ಹೇಳಿಕೆಗೆ ಸಿಟ್ಟಾದ ಸಿ.ಎಸ್ ನಾಡಗೌಡರು ಆಗ ಸಚಿವ ಸ್ಥಾನಕ್ಕಾಗಿ ನಾನು ಅರ್ಜಿ ಹಾಕಿದವನಲ್ಲ. ಬಯಸಿದವನಲ್ಲ. ತಾನಾಗಿಯೇ ಒಮ್ಮೆ ಮಂತ್ರಿ ಸ್ಥಾನ ಒಲಿದು ಬಂದಿತ್ತು. ಈಗ ಸೋಪ್ ಮತ್ತು ಡಿಟರ್ಜಂಟ್ ನಿಗಮ ಅಧ್ಯಕ್ಷ ಸ್ಥಾನವನ್ನು ಬಿಡಬೇಕೆಂದು ಯಶವಂತರಾಯಗೌಡ ಅವರು ಆಗ್ರಹಿಸಿದರೆ ನಾಳೆಯೇ ಆ ಸ್ಥಾನದ ಪದತ್ಯಾಗ ಮಾಡುತ್ತೇನೆ. ಈ ಸ್ಥಾನವನ್ನು ನೀವು ಅಲಂಕರಿಸಬಹುದು. ನೀವು ಮಂತ್ರಿಯಾದರು ನನಗೆ ಸಂತೋಷ. ಈ ರೀತಿಯ ಬಾಲಿಷ ಹೇಳಿಕೆಯನ್ನು ನೀಡಿ ನಿಮ್ಮ ಘನತೆಯನ್ನು ಕಳೆದುಕೊಳ್ಳಬೇಡಿ ಎಂದು ನಾಡಗೌಡರು ಕಿವಿಮಾತ ಹೇಳಿದರು.
ಈ ಹಿಂದೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಯಶವಂತರಾಯಗೌಡ ಅವರಿಗೆ ಬೆಂಬಲವಾಗಿ ನಿಂತವರು ಯಾರು ಎಂಬುದನ್ನು ಒಮ್ಮೆ ಸ್ಮರಿಸಿಕೊಳ್ಳಬೇಕು. ರಾಜಕೀಯದಲ್ಲಿ ಬದ್ಧತೆ ರಾಜಕಾರಣಿ ಸಿಗುವುದು ಈಗ ಅಪರೂಪ. ಸಚಿವ ಸ್ಥಾನಕ್ಕೆ ಸಿಗುವ ಎಲ್ಲಾ ಸೌಕರ್ಯಗಳನ್ನು ಸಣ್ಣವನಿರುವಾಗಲೇ ನಾನು ಅನುಭವಿಸಿದ್ದೇನೆ. ಈಗ ಸಚಿವ ಸ್ಥಾನ ಸಿಕ್ಕರೆ ಮತಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂಬ ದೃಷ್ಟಿಯಲ್ಲಿ ಹೈಕಮಾಂಡ್ ಹತ್ತಿರ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದೇನೆ ಹೊರತು ಎಸಿ ಕಾರಿಗಲ್ಲ. ಬರುವ ಪುನರ್ ಸಚಿವ ಸಂಪುಟದಲ್ಲಿ ಹೈಕಮಾಂಡ್ ನನ್ನನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಭರವಸೆವಿದೆ ಎಂದು ಶಾಸಕ ಸಿ.ಎಸ್ ನಾಡಗೌಡ ವ್ಯಕ್ತಪಡಿಸಿದರು.
