ಶತಮಾನಗಳಿಂದ ಕೋಟ್ಯಂತರ ಭಕ್ತರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಇದೀಗ ಸಂಪೂರ್ಣ ರೂಪ ಪಡೆದುಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಮುಖ್ಯ ಮಂದಿರ ಸೇರಿದಂತೆ ಆರು ಉಪಮಂದಿರಗಳ ನಿರ್ಮಾಣ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ.
ಟ್ರಸ್ಟ್ ತನ್ನ ಎಕ್ಸ್ ಖಾತೆಯ ಮೂಲಕ ಪ್ರಕಟಣೆ ನೀಡಿದ್ದು, “ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ಪ್ರಭು ಶ್ರೀರಾಮನ ಭಕ್ತರಿಗೆ ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ” ಎಂದು ಹೇಳಿದೆ. ಭಗವಾನ್ ಶ್ರೀರಾಮನ ಮುಖ್ಯ ಮಂದಿರದ ಜೊತೆಗೆ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಮಾ ಭಗವತಿ, ಮಾ ಅನ್ನಪೂರ್ಣ ಮತ್ತು ಶೇಷಾವತಾರ ಮಂದಿರಗಳಿಗೂ ಕಲಶ ಹಾಗೂ ಧ್ವಜಾರೋಹಣ ಕಾರ್ಯಗಳು ಯಶಸ್ವಿಯಾಗಿ ಮುಗಿದಿವೆ.

ಇದಷ್ಟೇ ಅಲ್ಲದೆ, ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯಾ ಅವರಿಗೆ ಸಮರ್ಪಿತವಾದ ಏಳು ಮಂಟಪಗಳೂ ಕೂಡ ನಿರ್ಮಾಣಗೊಂಡಿವೆ. ಭಕ್ತಕವಿ ತುಳಸಿದಾಸರ ಸ್ಮರಣಾರ್ಥ ನಿರ್ಮಿಸಲಾದ ಸಂತ ತುಳಸಿದಾಸ ಮಂದಿರವೂ ಅದ್ಧೂರಿಯಾಗಿ ಸಿದ್ಧವಾಗಿದೆ. ಅಲ್ಲದೆ ರಾಮಾಯಣದ ಅಮರ ಪಾತ್ರಗಳಾದ ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಅಲಂಕರಿಸಲಾಗಿದ್ದು, ಸ್ಥಳದ ಆಧ್ಯಾತ್ಮಿಕ ಭಾವನೆಗೆ ಮತ್ತಷ್ಟು ತೇಜಸ್ಸು ನೀಡಿದೆ.
ಭಕ್ತರ ಸೌಲಭ್ಯಕ್ಕಾಗಿ ಟ್ರಸ್ಟ್ ಅನೇಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ. ರಸ್ತೆ ನಿರ್ಮಾಣ, ಕಲ್ಲಿನ ನೆಲಹಾಸು ಹಾಗೂ ಸುಸಜ್ಜಿತ ಸೌಕರ್ಯಗಳನ್ನು ಎಲ್ & ಟಿ ಕಂಪನಿ ನಿರ್ವಹಿಸುತ್ತಿದೆ. ಮಂದಿರದ ಸುತ್ತಮುತ್ತ ಹಸಿರುಮಯ ವಾತಾವರಣ ನಿರ್ಮಿಸಲು 10 ಎಕರೆ ವಿಸ್ತೀರ್ಣದ “ಪಂಚವಟಿ”ಯ ಅಭಿವೃದ್ಧಿ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ವನವಾಸದ ಸಮಯದಲ್ಲಿ ನೆಲೆಸಿದ್ದ ಪವಿತ್ರ ಸ್ಥಳದ ಸ್ಮರಣಾರ್ಥ ಈ ಪಂಚವಟಿ ಅಭಿವೃದ್ಧಿಗೊಳಿಸಲಾಗಿದೆ.
ಇನ್ನು 3.5 ಕಿಲೋಮೀಟರ್ ಉದ್ದದ ತಡೆಗೋಡೆ, ಟ್ರಸ್ಟ್ ಕಚೇರಿ, ಅತಿಥಿಗೃಹ ಮತ್ತು ಸಭಾಂಗಣಗಳ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಮುಂದುವರಿದಿದೆ.
ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ, ಶ್ರೀರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಸುಮಾರು 6,000 ರಿಂದ 8,000 ಮಂದಿ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿಸಲಾದ ರಾಮ ಪರಿವಾರದಲ್ಲಿ ಆರತಿ ನೆರವೇರಿಸಿ ದೇವಾಲಯದ ಧ್ವಜಾರೋಹಣ ಮಾಡುವರು ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
