ಭಾರತೀಯ ಸಂಸ್ಕೃತಿಯಲ್ಲಿ ದೇವರ ಪೂಜೆ, ಹೋಮ, ಹವನ, ಗೃಹಪ್ರವೇಶ ಅಥವಾ ಯಾವುದೇ ಮಂಗಳಕಾರ್ಯಗಳಲ್ಲಿ ಕಳಶ ಸ್ಥಾಪನೆ ಒಂದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ. ಕಳಶವು ದೇವತೆಯ ಶಕ್ತಿ, ಶುದ್ಧತೆ ಮತ್ತು ಸೃಷ್ಟಿಯ ಮೂಲ ತತ್ವದ ಪ್ರತೀಕವೆಂದು ವೇದಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಕಳಶದ ಮೇಲೆ ಇಡುವ ತೆಂಗಿನಕಾಯಿ ಕೇವಲ ಅಲಂಕಾರವಲ್ಲ ಅದು ದೈವೀ ಶಕ್ತಿಯ ಆವರಣ ಎಂದು ಪರಿಗಣಿಸಲಾಗುತ್ತದೆ.
ಆದರೆ ಅನೇಕರು ಪೂಜೆ ಮುಗಿದ ಬಳಿಕ ಈ ಕಳಶದ ತೆಂಗಿನಕಾಯಿಯನ್ನು ಏನು ಮಾಡಬೇಕು? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ತಿಳಿಯದೇ ಗೊಂದಲದಲ್ಲಿರುತ್ತಾರೆ. ಈ ಕುರಿತು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಶಾಸ್ತ್ರೋಕ್ತವಾಗಿ ನೀಡಿರುವ ಮಾಹಿತಿ ಹೀಗಿದೆ.
ಕಳಶದಲ್ಲಿನ ತೆಂಗಿನಕಾಯಿಯ ದೈವೀ ಮಹತ್ವ:
ಕಳಶಕ್ಕೆ ಇಡುವ ತೆಂಗಿನಕಾಯಿ ದೇವರ ಸಾನಿಧ್ಯದಲ್ಲಿ ಇರಿಸುವುದರಿಂದ ಅದು ದೈವ ಸ್ವರೂಪ ಪಡೆಯುತ್ತದೆ. ಹೀಗಾಗಿ ಪೂಜೆ ಬಳಿಕ ಅದನ್ನು ನಿರ್ಲಕ್ಷ್ಯವಾಗಿ ಅಥವಾ ಸಾಮಾನ್ಯ ಉಪಯೋಗಕ್ಕಾಗಿ ಬಳಸಬಾರದು.
ಮಾಂಸದ ಅಡುಗೆಯಲ್ಲಿ ಬಳಸಬಾರದು:
ಶಾಸ್ತ್ರಗಳಲ್ಲಿ ಉಲ್ಲೇಖವಾದಂತೆ, ದೇವರಿಗೆ ಅರ್ಪಿಸಿದ ತೆಂಗಿನಕಾಯಿಯನ್ನು ಮಾಂಸದ ಅಡುಗೆಗೆ ಬಳಸುವುದು ಅಪಶಕುನ ಎಂದು ಹೇಳಲಾಗಿದೆ. ಇಂತಹ ಪ್ರಯೋಗದಿಂದ ಪೂಜೆಯ ಪಾವಿತ್ರ್ಯ ಕಳೆದುಹೋಗುತ್ತದೆ.
ಸಿಹಿ ಪದಾರ್ಥಕ್ಕೆ ಬಳಸುವುದು ಶ್ರೇಷ್ಠ:
ಜ್ಯೋತಿಷಿ ವಿವೇಕಾನಂದ ಆಚಾರ್ಯರ ಪ್ರಕಾರ, ಕಳಶದ ತೆಂಗಿನಕಾಯಿಯನ್ನು ಸಿಹಿ ಪದಾರ್ಥಗಳು (ಉದಾ: ಪಾಯಸ, ಹೋಳಿಗೆ, ಲಾಡು ಮುಂತಾದವು) ತಯಾರಿಸಲು ಬಳಸುವುದು ಅತ್ಯಂತ ಶುಭಕರ. ತಯಾರಿಸಿದ ಸಿಹಿ ಪದಾರ್ಥಗಳನ್ನು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಹಂಚಿದರೆ ಶುಭಫಲ ದೊರೆಯುತ್ತದೆ.
ತೆಂಗಿನಕಾಯಿ ಆಯ್ಕೆ ಮಾಡುವಾಗ ಎಚ್ಚರಿಕೆ:
ಕಳಶಕ್ಕೆ ಇಡುವ ತೆಂಗಿನಕಾಯಿ ಪೂರ್ಣವಾಗಿ ಒಣಗಿರಬಾರದು. ಒಣ ತೆಂಗಿನಕಾಯಿ ಕಳಶದಲ್ಲಿ ಇಟ್ಟರೆ ಮನೆಯವರ ಜೀವನದಲ್ಲಿ ಸಂಕಷ್ಟಗಳು ಅಥವಾ ಅಡೆತಡೆಗಳು ಎದುರಾಗಬಹುದು ಎಂದು ಶಾಸ್ತ್ರ ನುಡಿಸುತ್ತದೆ.
ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ ಅಥವಾ ಬಿರುಕು ಬಿಟ್ಟರೆ ಏನಾಗುತ್ತದೆ?
ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ, ಅದು ಆರ್ಥಿಕ ನಷ್ಟ ಅಥವಾ ಹಣಕಾಸಿನ ತೊಂದರೆಯ ಸೂಚನೆ ಎಂದು ಪರಿಗಣಿಸಲಾಗುತ್ತದೆ.
ತೆಂಗಿನಕಾಯಿಗೆ ಬಿರುಕು ಬಿದ್ದರೆ, ಮನೆಯ ಸದಸ್ಯರಿಗೆ ಅಪಘಾತ ಅಥವಾ ಅನಾರೋಗ್ಯ ಉಂಟಾಗುವ ಸಂಭವವಿದೆ ಎಂಬ ನಂಬಿಕೆಯೂ ಇದೆ.
ನೀರಿಲ್ಲದ ತೆಂಗಿನಕಾಯಿ ಶಕುನ:
ಕಳಶಕ್ಕೆ ಇಡುವ ತೆಂಗಿನಕಾಯಿಯಲ್ಲಿ ನೀರು ಇಲ್ಲದಿದ್ದರೆ, ಅದು ಸಂತಾನ ಭಾಗ್ಯ ಕುಂದಿಸುವ ಸೂಚನೆ ಎಂದು ಹೇಳಲಾಗಿದೆ. ಕೆಲವೆಡೆ ಇದನ್ನು ಮಕ್ಕಳು ದಾರಿ ತಪ್ಪುವ ಸಾಧ್ಯತೆ ಎಂದೂ ಅರ್ಥೈಸಲಾಗುತ್ತದೆ.
ಅರ್ಚಕರಿಗೆ ಅಥವಾ ಅನ್ಯರಿಗೆ ನೀಡಬಾರದು:
ಪೂಜೆ ಮುಗಿದ ಬಳಿಕ ಕಳಶದ ತೆಂಗಿನಕಾಯಿಯನ್ನು ಅನ್ಯರಿಗೆ ಅಥವಾ ಅರ್ಚಕರಿಗೆ ನೀಡುವುದು ತಪ್ಪು ಎಂದು ಜ್ಯೋತಿಷಿ ಎಚ್ಚರಿಸುತ್ತಾರೆ. ಹೀಗೆ ಮಾಡಿದರೆ, ಪೂಜೆಯಿಂದ ಪಡೆದ ಪುಣ್ಯ ಫಲ ನಮ್ಮಿಂದ ದೂರವಾಗಿ, ಅದನ್ನು ಸ್ವೀಕರಿಸಿದವರಿಗೆ ತಲುಪುತ್ತದೆ ಎಂದು ನಂಬಿಕೆ ಇದೆ.
ಕಳಶದ ತೆಂಗಿನಕಾಯಿ ಕೇವಲ ಪೂಜಾ ಸಾಮಗ್ರಿ ಅಲ್ಲ, ಅದು ದೇವರ ಕೃಪೆಯ ಪ್ರತೀಕ. ಅದನ್ನು ಗೌರವದಿಂದ ಬಳಸುವುದು, ಸಿಹಿ ಪದಾರ್ಥ ತಯಾರಿಸಿ ಹಂಚಿಕೊಳ್ಳುವುದು ಮತ್ತು ನಿರ್ಲಕ್ಷ್ಯವಾಗಿ ಉಪಯೋಗಿಸದಿರುವುದು ಶಾಸ್ತ್ರೋಕ್ತ ಶ್ರೇಷ್ಠ ಕ್ರಮ ಎಂದು ಪರಿಗಣಿಸಲಾಗಿದೆ.
