ಕ್ರಿಕೆಟ್ ಪ್ರಪಂಚದ ಗಮನ ಈಗ ಅಡಿಲೇಡ್‌ನತ್ತ ನೆಟ್ಟಿದೆ. ಭಾರತೀಯ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣ ತರುವಂತ ವಿರಾಟ್ ಕೊಹ್ಲಿ ಮತ್ತೊಂದು ಚರಿತ್ರೆ ಬರೆಯಲು ಸಜ್ಜಾಗಿದ್ದಾರೆ. ಅಕ್ಟೋಬರ್ 23ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ತಮ್ಮ ಬ್ಯಾಟ್‌ನಿಂದ ದಾಖಲೆಗಳ ಮಳೆ ಸುರಿಸುವ ಸಾಧ್ಯತೆ ಇದೆ.
ಅಡಿಲೇಡ್ ಮೈದಾನ ಕೊಹ್ಲಿಗೆ ಅತಿ ಪ್ರಿಯವಾದ ಮೈದಾನಗಳಲ್ಲಿ ಒಂದು. ಇಲ್ಲಿಯ ಪಿಚ್, ವಾತಾವರಣ ಮತ್ತು ಅಭಿಮಾನಿಗಳ ಉತ್ಸಾಹ ಈ ಎಲ್ಲವೂ ಅವರ ಆಟಕ್ಕೆ ಜೀವ ತುಂಬುತ್ತವೆ. ಈ ಮೈದಾನದಲ್ಲಿ ಅವರು ಈಗಾಗಲೇ 5 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲಿ 2 ಏಕದಿನಗಳು ಮತ್ತು 3 ಟೆಸ್ಟ್‌ಗಳು ಸೇರಿವೆ. ಈ ಮೂಲಕ ಅವರು ಇಂಗ್ಲೆಂಡ್‌ನ ದಾಂಡಿಗ ಜ್ಯಾಕ್ ಹಾಬ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಬ್ಸ್ ಅವರು ಮೆಲ್ಬೋರ್ನ್ ಮೈದಾನದಲ್ಲಿ 5 ಶತಕಗಳನ್ನು ಬಾರಿಸಿದ್ದರು. ಈಗ ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಮತ್ತೊಂದು ಶತಕ ಬಾರಿಸಿದರೆ, ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎಂಬ ಹೊಸ ದಾಖಲೆಯು ಅವರ ಹೆಸರಿಗಿರಲಿದೆ.
ಇಷ್ಟೇ ಅಲ್ಲದೆ ಕೊಹ್ಲಿ ಇನ್ನೂ ಕೇವಲ 25 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ರನ್ ಪೂರೈಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಗೌರವವೂ ಅವರಿಗೆ ದೊರೆಯಲಿದೆ. ಈಗಾಗಲೇ ಅವರು ಈ ಮೈದಾನದಲ್ಲಿ 17 ಇನಿಂಗ್ಸ್‌ಗಳಲ್ಲಿ 975 ರನ್‌ಗಳನ್ನು ಕಲೆಹಾಕಿದ್ದಾರೆ. ಅಂದರೆ ನಾಳೆಯ ಪಂದ್ಯದಲ್ಲಿ ಕೇವಲ ಒಂದು ಸಣ್ಣ ಇನಿಂಗ್ಸ್ ಅವರ ಹೆಸರನ್ನು ಮತ್ತೊಂದು ಮೈಲುಗಲ್ಲಿನತ್ತ ಕರೆದೊಯ್ಯಲಿದೆ.
ಅಡಿಲೇಡ್ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಎಂದರೆ ಕಣ್ಣಿಗೆ ಹಬ್ಬ. ಪಿಚ್‌ನಲ್ಲಿ ಬೌನ್ಸ್ ಮತ್ತು ಸ್ವಿಂಗ್ ಇದ್ದರೂ ಅವರು ಅದನ್ನು ತಾಳ್ಮೆಯಿಂದ ಎದುರಿಸಿ, ಅಚ್ಚುಕಟ್ಟಾದ ಶಾಟ್‌ಗಳ ಮೂಲಕ ರನ್ ಕಲೆಹಾಕುತ್ತಾರೆ. ಅವರ ಸ್ಮರಣೀಯ ಇನಿಂಗ್ಸ್‌ಗಳು, ಗೆಲುವಿಗೆ ದಾರಿ ಮಾಡಿದ ಶತಕಗಳು ಇವೆಲ್ಲವೂ ಈ ಮೈದಾನದ ನೆನಪನ್ನು ಅಭಿಮಾನಿಗಳ ಮನದಲ್ಲಿ ಶಾಶ್ವತಗೊಳಿಸಿವೆ.
ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿಯ ಹೆಸರು ಎಂದರೆ ನಂಬಿಕೆ, ಹೋರಾಟ, ಹಾಗೂ ಪ್ರೇರಣೆ. ಅವರು ಕೇವಲ ಬ್ಯಾಟ್ಸ್‌ಮನ್ ಅಲ್ಲ, ಭಾರತದ ಕ್ರಿಕೆಟ್ ಗೌರವದ ಪ್ರತೀಕ. ಈ ಸರಣಿಯಲ್ಲೂ ಅವರು ಅದೇ ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಮೈದಾನಕ್ಕಿಳಿಯುತ್ತಿದ್ದಾರೆ.
ಅಭಿಮಾನಿಗಳೆಲ್ಲರೂ ಈಗ ಕಾತರದಿಂದ ಕಾಯುತ್ತಿರುವುದು ಒಂದೇ ವಿಷಯಕ್ಕೆ ಅಡಿಲೇಡ್ ಮೈದಾನದಲ್ಲಿ ಮತ್ತೆ ಒಮ್ಮೆ ಕಿಂಗ್ ಕೊಹ್ಲಿಯ ಬ್ಯಾಟ್ ಮಿಂಚಲಿ, ಮತ್ತೊಂದು ಶತಕ ಭಾರಿಸಿ ಇತಿಹಾಸ ಬರೆಯಲಿ!

