ಕರ್ನಾಟಕದ ಸರ್ಕಾರಿ ನೌಕರರಿಗೆ ಸಂತೋಷದ ಸುದ್ದಿ ಬಂದಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನೀಡಿರುವ ಇತ್ತೀಚಿನ ಹೇಳಿಕೆ ಪ್ರಕಾರ, ನೌಕರರ ಹಿತಾಸಕ್ತಿಗಾಗಿ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೆತ್ತಿಕೊಂಡಿದೆ. ಇದರಲ್ಲಿಯೇ ಪ್ರಮುಖವಾಗಿರುವುದು ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತರಲು ನಡೆಯುತ್ತಿರುವ ಪ್ರಯತ್ನಗಳು.
ರಾಜ್ಯ ಸರ್ಕಾರಿ ನೌಕರರ ಸಂಘವು 2026-27ರ ಅಂತ್ಯದೊಳಗೆ ಕೇಂದ್ರ ಸರ್ಕಾರದ ಮಾದರಿಯ ವೇತನ ಶ್ರೇಣಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ಬದ್ಧವಾಗಿದೆ ಎಂದು ಸಂಘದ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಇದರಿಂದ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಹಾಗೂ ಸೌಲಭ್ಯಗಳು ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ನೌಕರರ ಹಿತಕ್ಕಾಗಿ ಸಂಘದ ಮುಂದಾಳತ್ವ:
ಕಾರವಾರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಸ್. ಷಡಾಕ್ಷರಿ ಅವರು, ರಾಜ್ಯದ ನೌಕರರು ನೆಮ್ಮದಿಯಿಂದ ಬದುಕುವುದೇ ನಮ್ಮ ಸಂಘದ ಧ್ಯೇಯವಾಗಿದೆ. ಹೀಗಾಗಿ ನೌಕರರಿಗೆ ನೀಡಲಾಗುವ ಹಬ್ಬದ ಮುಂಗಡವನ್ನು ಪ್ರಸ್ತುತ ₹25,000 ರಿಂದ ₹50,000ಕ್ಕೆ ಹೆಚ್ಚಿಸಲು ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ, ಎಂದು ತಿಳಿಸಿದ್ದಾರೆ. ಹೊಸ ಪಿಂಚಣಿ ಯೋಜನೆ (NPS) ಬದಲಿಗೆ ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತರಲು ನಮ್ಮ ಸಂಘ ನಿರಂತರ ಪ್ರಯತ್ನಿಸುತ್ತಿದೆ. ನೌಕರರ ಭವಿಷ್ಯ ಭದ್ರತೆಗೆ ಇದು ಅತ್ಯಂತ ಅಗತ್ಯ ಎಂದು ತಿಳಿಸಿದ್ದಾರೆ.
ನೌಕರರಿಗೆ ಕ್ಯಾಂಟೀನ್ ಸೌಲಭ್ಯ, ಗೃಹೋಪಯೋಗಿ ವಸ್ತುಗಳಿಗೆ ರಿಯಾಯಿತಿ:
ನೌಕರರ ಆರ್ಥಿಕ ಭಾರ ಕಡಿಮೆ ಮಾಡಲು, ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್‌ಐಎಲ್ (MSIL) ಮುಖಾಂತರ ಹೊಸ ಯೋಜನೆ ರೂಪಿಸಲಾಗಿದೆ.
ಈ ಯೋಜನೆಯಡಿ, ಸರ್ಕಾರಿ ನೌಕರರು 20 ರಿಂದ 25 ಶೇಕಡಾ ರಿಯಾಯಿತಿಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಅವಕಾಶ ಪಡೆಯಲಿದ್ದಾರೆ.
ಮೊದಲ ಹಂತದಲ್ಲಿ ಈ ಯೋಜನೆ ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ.
ನೌಕರರ ಕುಟುಂಬ ಭದ್ರತೆಗೆ ಹೊಸ ವಿಮೆ ಯೋಜನೆ:
ಕರ್ತವ್ಯ ನಿರ್ವಹಣೆಯ ವೇಳೆ ದುರ್ಘಟನೆಗೆ ಒಳಗಾಗಿ ಮರಣ ಹೊಂದಿದ ಸರ್ಕಾರಿ ನೌಕರರ ಕುಟುಂಬಕ್ಕೆ ₹1 ಕೋಟಿ ರೂ. ವಿಮೆ ಮೊತ್ತ ನೀಡುವ ಸ್ಯಾಲರಿ ಪ್ಯಾಕೇಜ್ ಯೋಜನೆ ಈಗಾಗಲೇ ಜಾರಿಗೆ ಬಂದಿದೆ. ಇದರ ಮೂಲಕ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರೆಯಲಿದೆ ಎಂದು ಷಡಾಕ್ಷರಿ ತಿಳಿಸಿದ್ದಾರೆ.
ಆರೋಗ್ಯ ಸಂಜೀವಿನಿ ಯೋಜನೆ:
ಅಕ್ಟೋಬರ್ 1ರಿಂದ ರಾಜ್ಯ ಸರ್ಕಾರವು ‘ಆರೋಗ್ಯ ಸಂಜೀವಿನಿ ಯೋಜನೆ’ಯನ್ನು ಜಾರಿಗೆ ತಂದಿದ್ದು, ಈಗ ಮೊದಲ ಹಂತದಲ್ಲಿ ಒಳರೋಗಿಗಳಿಗೆ ಸೌಲಭ್ಯ ಲಭ್ಯವಿದೆ.
ಮುಂದಿನ ದಿನಗಳಲ್ಲಿ ಹೊರ ರೋಗಿಗಳಿಗೆ ಸಹ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶ ಇದೆ.
ಮಹಿಳಾ ನೌಕರರು ತಮ್ಮ ತಂದೆ–ತಾಯಿಗಳನ್ನು ಸಹ ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದೆ ಎಂಬುದು ವಿಶೇಷ.
ಮಹಿಳಾ ನೌಕರರಿಗೆ ವಿಶೇಷ ರಜೆ:
ಮಹಿಳಾ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು, ಋತುಚಕ್ರದ ಅವಧಿಯಲ್ಲಿ ಪ್ರತಿ ತಿಂಗಳು ಒಂದು ದಿನದಂತೆ ವರ್ಷಕ್ಕೆ 12 ವಿಶೇಷ ಸಾಂದರ್ಭಿಕ ರಜೆಗಳು ನೀಡುವಂತೆ ಸಂಘದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.
ಈ ಪ್ರಸ್ತಾವನೆಗೆ ಸಚಿವ ಸಂಪುಟದಿಂದ ಅನುಮೋದನೆ ದೊರೆತಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.
ಇದರಿಂದ ರಾಜ್ಯದ 2.25 ಲಕ್ಷ ಮಹಿಳಾ ನೌಕರರು ಪ್ರಯೋಜನ ಪಡೆಯಲಿದ್ದಾರೆ.
ಸಾಮಾಜಿಕ ಸಮೀಕ್ಷೆ ಕುರಿತು ಅಸಮಾಧಾನ:
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವೇಳೆ ನೌಕರರು ಅನುಭವಿಸಿದ ತೊಂದರೆಗಳ ಕುರಿತು ಮಾತನಾಡಿದ ಷಡಾಕ್ಷರಿ, 60 ಪ್ರಶ್ನೆಗಳಲ್ಲಿ ಅನೇಕ ಅನಾವಶ್ಯಕ ಪ್ರಶ್ನೆಗಳಿದ್ದರಿಂದ ನೌಕರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಇನ್ನು , ರಾಜ್ಯ ಸರ್ಕಾರಿ ನೌಕರರ ಸಂಘದ ಈ ಪ್ರಕಟಣೆ ನೌಕರರ ಹಿತಾಸಕ್ತಿ, ಭದ್ರತೆ ಮತ್ತು ಸೌಲಭ್ಯಗಳ ಕಡೆಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬುದನ್ನು ತೋರಿಸುತ್ತದೆ.
ಹಳೆ ಪಿಂಚಣಿ ಯೋಜನೆ ಜಾರಿಯ ಪ್ರಯತ್ನದಿಂದ ಹಿಡಿದು ಮಹಿಳಾ ನೌಕರರ ಕಲ್ಯಾಣದವರೆಗೆ, ಸರ್ಕಾರ ಮತ್ತು ಸಂಘದ ಸಂಯುಕ್ತ ಪ್ರಯತ್ನಗಳು ರಾಜ್ಯದ ಸರ್ಕಾರಿ ನೌಕರರ ಜೀವನಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವ ಭರವಸೆ ನೀಡುತ್ತಿವೆ.

