ಬಿಹಾರ ವಿಧಾನಸಭೆ ಚುನಾವಣೆ (Bihar Election 2025) ಸಮೀಪಿಸುತ್ತಿರುವಂತೆ, ರಾಜಕೀಯ ವಾತಾವರಣ ದಿನೇದಿನೇ ಚುರುಕಾಗುತ್ತಿದೆ. ಚುನಾವಣಾ ಚಟುವಟಿಕೆಗಳು ತೀವ್ರಗೊಂಡಿರುವ ಈ ವೇಳೆಯಲ್ಲಿ ಕರ್ನಾಟಕ ಮತ್ತು ಬಿಹಾರ ರಾಜಕೀಯದ ನಡುವೆ ಹೊಸ ವಾಗ್ವಾದ ಉಂಟಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ಜೋರಾಗಿವೆ. ಈ ಪೈಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ತಿರುಗೇಟು ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, “ಬಿಹಾರ ಚುನಾವಣೆಗೆ ಹಣ ಕಲೆಕ್ಷನ್ ಮಾಡಿರೋದು ನಾವು ಅಲ್ಲ, ಬಿಜೆಪಿ. ಅವರು ಮಾಡುವ ಕೆಲಸವನ್ನು ನಮ್ಮ ಮೇಲೆ ಹಾಕ್ತಿದ್ದಾರೆ,” ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕರು ಕರ್ನಾಟಕವನ್ನು ‘ಎಟಿಎಂ ರಾಜ್ಯದಂತೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಇನ್ನು, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ (RSS Activities Ban) ಕುರಿತ ವಿವಾದಕ್ಕೂ ಅವರು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಹೊರಡಿಸಿದ ಸುತ್ತೋಲೆ ಹೊಸದೇನಲ್ಲ. ಇದೇ ರೀತಿಯ ಸುತ್ತೋಲೆ 2013ರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಿಕ್ಷಣ ಇಲಾಖೆಯ ಮೂಲಕ ಹೊರಡಿಸಿದ್ದರು, ಅದೇ ಸುತ್ತೋಲೆ ಈಗಲೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಯಾವ ಸಂಸ್ಥೆ ಚಟುವಟಿಕೆ ನಡೆಸಬೇಕು ಎಂಬುದು ಸರ್ಕಾರದ ಪರಿಗಣನೆಗೆ ಒಳಪಟ್ಟ ವಿಷಯ. ಪರ್ಮಿಷನ್ ಬೇಕು ಎಂದರೆ ಅದು ಕಡ್ಡಾಯವಲ್ಲ. ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದಲೇ ಅನುಮತಿ ನೀಡಲಾಗುತ್ತದೆ,” ಎಂದು ಹೇಳಿದರು.
ಈ ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಹಾರ ಚುನಾವಣೆಗೂ ಮುನ್ನ ರಾಜಕೀಯ ಕೆಸರೆರರಾಚಾಟಕ್ಕೆ ಪುಷ್ಟಿ ತುಂಬಿದ್ದಾರೆ.

