ಕನ್ನಡ ಚಿತ್ರರಂಗದ ಅಗ್ರಗಣ್ಯ ನಟ, ರಾಜಕಾರಣಿ ಹಾಗೂ ಸಂವೇದನಾಶೀಲ ಕಲಾವಿದರಾದ ಅನಂತ್ ನಾಗ್ ಅವರಿಗೆ ಈ ವರ್ಷ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಕನ್ನಡಿಗರಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿದೆ. ಸುಮಾರು ಐದು ದಶಕಗಳಷ್ಟು ದೀರ್ಘ ಮತ್ತು ವೈವಿಧ್ಯಮಯ ಕಲಾಜೀವನದಲ್ಲಿ ಅನಂತ್ ನಾಗ್ ಅವರು ನಟನೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಮಾಡಿದವರು. ಶಿಸ್ತಿನ ಅಭಿನಯ, ಸಾಂಸ್ಕೃತಿಕ ನಂಟು ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಚಲನಚಿತ್ರ ರಂಗದಲ್ಲಷ್ಟೇ ಅಲ್ಲ, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿಯೂ ವಿಶಿಷ್ಟ ಗುರುತು ಮೂಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪದ್ಮ ಪ್ರಶಸ್ತಿ ಪಡೆದ ನಟರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಅನಂತ್ ನಾಗ್ ಮಾತನಾಡಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ಇದು ನನ್ನ ಪ್ರಶಸ್ತಿ ಅಲ್ಲ, ಕನ್ನಡ ಚಿತ್ರರಂಗದ್ದು ಎಂದು ಅವರು ವಿನಯದಿಂದ ಹೇಳಿದ್ದಾರೆ.
ಜಗ್ಗೇಶ್ ಮಾತು ನೆನಪಿಸಿಕೊಂಡ ಅನಂತ್ ನಾಗ್:
ಇದೇ ಸಂದರ್ಭದಲ್ಲಿ ಅನಂತ್ ನಾಗ್, ಹಿರಿಯ ನಟ ಮತ್ತು ಸಂಸದ ಜಗ್ಗೇಶ್ ಅವರ ಮಾತುಗಳನ್ನು ನೆನಪಿಸಿಕೊಂಡು, ಅರ್ಹರಿಗೆ ಪ್ರಶಸ್ತಿ ಕೊಡಬೇಕು ಅಂತ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿ ಅವ್ರು ಎಂದು ಅವರು ಹೇಳಿದ್ದನ್ನು ಸ್ಮರಿಸಿದರು. ಈ ಪ್ರಶಸ್ತಿಯ ಹಿಂದಿನ ಉದ್ದೇಶವೇ ಕನ್ನಡ ಚಿತ್ರರಂಗದ ಸೇವೆಗೆ ಸಿಕ್ಕ ಗೌರವವೆಂದು ಅವರು ತಿಳಿಸಿದ್ದಾರೆ.
ರಾಜಕೀಯ ನೆನಪು ಹಂಚಿಕೊಂಡ ಅನಂತ್ ನಾಗ್:
ತಮ್ಮ ರಾಜಕೀಯ ಹಾದಿಯನ್ನು ಸ್ಮರಿಸಿದ ಅವರು, ನಾನು ಮೊದಲ ಸಲ ಅಸೆಂಬ್ಲಿಗೆ ಹೋದಾಗ ಮಂತ್ರಿಯಾಗಿದ್ದೆ. ಆಗ ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ‘ಇಷ್ಟು ಸ್ಮಾರ್ಟ್ ವ್ಯಕ್ತಿ ರಾಜಕೀಯದಲ್ಲಿ ಏನು ಮಾಡ್ತಿದ್ದಾರೆ?’ ಅನ್ನಿಸಿತು. ಆಗಿನಿಂದಲೂ ಡಿಕೆಶಿ ಇಂಡಸ್ಟ್ರಿಗೆ ಬರ್ಬೇಕಿತ್ತು ಅನ್ನಿಸಿತು” ಎಂದು ನಗುತ್ತಾ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.
53 ವರ್ಷಗಳ ಸಿನಿ ಜರ್ನಿಯ ಮೆಲುಕು:
ತಮ್ಮ 53 ವರ್ಷಗಳ ಸಿನಿಮಾ ಬದುಕಿನ ಬಗ್ಗೆ ಮಾತನಾಡಿದ ಅವರು, ನಿರ್ದೇಶಕರು, ನಿರ್ಮಾಪಕರು, ಸಾಹಿತ್ಯಕಾರರು ಮತ್ತು ಸಂಭಾಷಣೆ ಬರಹಗಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ನಾನು ಒಂದೇ ಒಂದು ಹಾಡಿನಲ್ಲೂ ಡಾನ್ಸ್ ಮಾಡಿಲ್ಲ. ಎಕ್ಸೆಪ್ಶನ್ ಕೊಟ್ಟಿದ್ದೆ ಅಷ್ಟೇ. ಡಾನ್ಸ್, ಫೈಟ್ ಏನೂ ಮಾಡಿಲ್ಲ. ಆದರೆ ಕನ್ನಡಿಗರು ನನ್ನನ್ನು ಕ್ಷಮಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ಅದನ್ನೇ ಅವರು ಒಪ್ಪಿಕೊಂಡಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಇನ್ನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಪವಿತ್ರವಾದ ಸಂಭ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆಯುತ್ತಿರುವ ಪವಿತ್ರ ಕೆಲಸ ಇದು. ನಾನು 35 ವರ್ಷಗಳ ಹಿಂದೆ ಡೈರೆಕ್ಟರ್ ಆಗಿದ್ದೆ. ಎಲೆಕ್ಷನ್‌ಗೂ ಮೊದಲು ಡೈರೆಕ್ಟರ್ ಆಗಿದ್ದೆ. ಅನಂತ್ ನಾಗ್ ಅವರಿಗೆ ಸನ್ಮಾನ ಎಂದಿದ್ದಕ್ಕಾಗಿ ಮಾತ್ರ ನಾನು ಇಲ್ಲಿ ಬಂದಿದ್ದೇನೆ ಎಂದರು. ಇನ್ನು, ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗ ಇದೆ. ಭಕ್ತಿ ಇದ್ದರೆ ಭಗವಂತ ಇದ್ದಾನೆ. ನೀವು ಬಣ್ಣ ಹಾಕಿಕೊಂಡು ನಾಟಕ ಮಾಡ್ತಿದ್ದೀರಾ, ನಾವು ಬಣ್ಣ ಹಾಕದೆ ನಾಟಕ ಮಾಡ್ತಿದ್ದೀವಿ. ಕಳೆದ ಕೆಲವು ವರ್ಷಗಳಿಂದ ಸ್ಯಾಂಡಲ್‌ವುಡ್ ಬಾಲಿವುಡ್‌ನನ್ನೇ ಟೇಕ್‌ಓವರ್ ಮಾಡಿದೆ ಎಂದು ಶ್ಲಾಘಿಸಿದರು.
ಅನಂತ್ ನಾಗ್ ಅವರಿಗೆ ದೊರೆತಿರುವ ಪದ್ಮಭೂಷಣ ಪ್ರಶಸ್ತಿ, ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅದು ಕನ್ನಡ ಚಿತ್ರರಂಗದ ಪರಂಪರೆ, ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕ ರಾಷ್ಟ್ರ ಮಟ್ಟದ ಮಾನ್ಯತೆ.

