ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 75ನೇ ವರ್ಷದ ಸಂಭ್ರಮದ ಅಂಗವಾಗಿ ಒಂದು ಮಹತ್ವದ ಸಾಮಾಜಿಕ ಯೋಜನೆಯನ್ನು ಆರಂಭಿಸಿದೆ. ಎಸ್‌ಬಿಐ ಫೌಂಡೇಶನ್ ಮೂಲಕ “ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ” ಎಂಬ ಹೊಸ ವಿದ್ಯಾರ್ಥಿವೇತನ ಯೋಜನೆ ಘೋಷಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಹೊಸ ಬೆಳಕಾಗಲಿದೆ.
ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು
ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ, ಅನೇಕ ವಿದ್ಯಾರ್ಥಿಗಳು ಹಣದ ಕೊರತೆಯಿಂದ ತಮ್ಮ ವಿದ್ಯಾಭ್ಯಾಸ ನಿಲ್ಲಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಎಸ್‌ಬಿಐ ಆಶಾ ವಿದ್ಯಾರ್ಥಿವೇತನದ ಯೋಜನೆ ರೂಪಗೊಂಡಿದೆ. ಶಾಲಾ ಹಂತದಿಂದ ಪದವಿ, ಸ್ನಾತ್ತಕೋತ್ತರ ಹಾಗೂ ವೃತ್ತಿಪರ ಕೋರ್ಸ್ ಗಳ ವರೆಗೆ ವ್ಯಾಪಿಸಿದೆ.
ಐಐಟಿ, ಐಐಎಂ, ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದರ ಅಡಿಯಲ್ಲಿ ನೆರವನ್ನು ಪಡೆಯಬಹುದು, ಇದಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೂ ಇದು ಸಹಾಯವಾಗಲಿದೆ.
ಆರ್ಥಿಕ ನೆರವು 15 ಸಾವಿರದಿಂದ 20 ಲಕ್ಷದವರೆಗೆ:
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವಾರ್ಷಿಕ ಕನಿಷ್ಠ ₹15,000ರಿಂದ ಗರಿಷ್ಠ ₹20 ಲಕ್ಷ ರೂ.ವರೆಗೆ ಆರ್ಥಿಕ ನೆರವು ದೊರೆಯಲಿದೆ. ಈ ಮೊತ್ತವನ್ನು ಕಾಲೇಜು ಶುಲ್ಕ, ಪುಸ್ತಕಗಳು, ವಸತಿ, ಹಾಗೂ ಇತರ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಬಳಸಬಹುದಾಗಿದೆ.
ಈ ವರ್ಷವೇ ದೇಶದಾದ್ಯಂತ 23,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಎಸ್ ಬಿಐ (SBI) ತಿಳಿಸಿದೆ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು
- ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರಾಗಿರಬೇಕು.
- ಶಾಲಾ ಹಂತದ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಕನಿಷ್ಠ 75% ಅಂಕಗಳು ಪಡೆದಿರಬೇಕು.
- SC/ST ವಿದ್ಯಾರ್ಥಿಗಳಿಗೆ ಅಂಕಗಳಲ್ಲಿ 10% ರಷ್ಟು ಸಡಿಲಿಕೆ ನೀಡಲಾಗಿದೆ.
- ಶಾಲಾ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ಮೀರಬಾರದು, ಕಾಲೇಜು ಅಥವಾ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳ ಆದಾಯ 6 ಲಕ್ಷ ರೂ. ಮೀರಬಾರದು.
- ವಿದೇಶದಲ್ಲಿ ಓದುವ SC/ST ವಿದ್ಯಾರ್ಥಿಗಳು ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು.
ಅರ್ಜಿ ಮತ್ತು ಪ್ರಕ್ರಿಯೆ
ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲ್ಲಿದ್ದೂ, ವಿದ್ಯಾರ್ಥಿಗಳು SBI Foundation ಅಥವಾ Buddy4Study ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವೇಳೆ ಅಂಕಪಟ್ಟಿ, ಗುರುತಿನ ಚೀಟಿ, ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಆಯ್ಕೆ ಪ್ರಕ್ರಿಯೆ ಅಂಕ, ಆದಾಯ ಮತ್ತು ಶೈಕ್ಷಣಿಕ ಸಾಮರ್ಥ್ಯದ ಆಧಾರದ ಮೇಲೆ ನಡೆಯಲಿದೆ.
ಎಸ್‌ಬಿಐ ಆಶಾ ವಿದ್ಯಾರ್ಥಿವೇತನವು ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ ತರಲು ಮಹತ್ವದ ಹೆಜ್ಜೆಯಾಗಲಿದೆ. ಇದು ಕೇವಲ ಹಣಕಾಸು ನೆರವಲ್ಲ ಹಲವು ವಿದ್ಯಾರ್ಥಿಗಳಿಗೆ ಭರವಸೆ ಮತ್ತು ಪ್ರೇರಣೆ ನೀಡುವ ಯೋಜನೆಯಾಗಿದೆ. ಹಣದ ಕೊರತೆಯಿಂದ ವಿದ್ಯಾಭ್ಯಾಸ ಕಳೆದುಕೊಳ್ಳುತ್ತಿದ್ದ ಅನೇಕ ಕನಸುಗಳಿಗೆ ಈ ಯೋಜನೆ ಹೊಸ ಬೆಳಕಾಗಲಿದೆ.

