ಭಾರತದ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ವೇದಿಕೆಯ ಮೇಲೆ ತಮ್ಮ ಗಾಯನದಿಂದ ಜನಮನ ಸೆಳೆಯುವ ವಿಶಿಷ್ಟ ಶೈಲಿಯಿಂದ ಖ್ಯಾತಿ ಗಳಿಸಿರುವ ರಘು, ಇದೀಗ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಈ ಮದುವೆ ಕೇವಲ ಇಬ್ಬರು ಕಲಾವಿದರ ವೈಯಕ್ತಿಕ ಬಂಧನವಲ್ಲ, ಸಂಗೀತ ಲೋಕದಲ್ಲಿ ಮೂಡಿದ ಅಪರೂಪದ ಬಾಂಧವ್ಯಕ್ಕೂ ಸಾಕ್ಷಿಯಾಗಲಿದೆ. ಇಬ್ಬರೂ ಕೂಡ ತಮ್ಮದೇ ಆದ ಗುರುತಿನಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದು, ಅವರ ಸಂಗೀತಯಾತ್ರೆಯೇ ಈ ಪ್ರೀತಿಯ ಸೇತುವೆಯಾಗಿದೆ ಎನ್ನಬಹುದು.
ಎರಡನೇ ವಿವಾಹ, ಹೊಸ ಬಾಳಿನ ಹೊಸ ಪುಟ: ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಅವರೊಂದಿಗೆ ಅವರು ವೈವಾಹಿಕ ಜೀವನ ನಡೆಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಅವರ ವಿವಾಹ ಮುರಿದುಬಿದ್ದಿತ್ತು. ಆ ಬಳಿಕ, ತಮ್ಮ ಸಂಗೀತಯಾತ್ರೆಯ ಮಧ್ಯೆ ವಾರಿಜಶ್ರೀ ಅವರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದರು ರಘು ದೀಕ್ಷಿತ್.
ವಾರಿಜಶ್ರೀ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ. ಶಾಸ್ತ್ರೀಯ ಸಂಗೀತದಲ್ಲಿ ಪ್ರಾವೀಣ್ಯತೆ ಅವರು, ಪಾಶ್ಚಾತ್ಯ ಹಾಗೂ ಭಾರತೀಯ ಸಂಗೀತವನ್ನು ವಿಶಿಷ್ಟವಾಗಿ ಸಂಯೋಜಿಸುವ ಶೈಲಿಗೆ ಖ್ಯಾತರಾಗಿದ್ದಾರೆ. ರಘುದೀಕ್ಷಿತ್ ಮತ್ತು ವಾರಿಜಶ್ರೀ ಹಲವಾರು ಆಲ್ಬಂಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ ಮತ್ತು ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು.
ಸಂಗೀತದಿಂದ ಪ್ರೀತಿ, ಪ್ರೀತಿಯಿಂದ ಜೀವನ: ಸಾಕು ಇನ್ನು ಸಾಕು ಆಲ್ಬಮ್‌ನಲ್ಲಿ ಇವರ ಸಂಗೀತ ಸಹಯೋಗವೇ ಇವರ ಪ್ರೀತಿಗೆ ದಾರಿ ಮಾಡಿಕೊಟ್ಟಿತು ಎನ್ನಲಾಗುತ್ತಿದೆ. COVID ಕಾಲಘಟ್ಟದಲ್ಲಿ ಇವರಿಬ್ಬರು ಹಾಡಿದ ಕೆಲವು ಹಾಡುಗಳು ಅಪಾರ ಜನಪ್ರಿಯತೆ ಪಡೆದಿದ್ದವು. ಅದೇ ಸಮಯದಲ್ಲಿ ಇವರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ತಿಂಗಳ ಕೊನೆಯಲ್ಲಿ ಮದುವೆ: ಇವರ ವಿವಾಹ ಈ ತಿಂಗಳ ಕೊನೆಯಲ್ಲಿ ನಡೆಯುವ ಸಾಧ್ಯತೆ ಇದೆ. ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮದುವೆ ಸಂಗೀತ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಮತ್ತು ಸಂಗೀತಪ್ರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಹೊಸ ಜೀವನಕ್ಕೆ ಸಂಗೀತಮಯ ಶುಭಾರಂಭ: ರಘು ದೀಕ್ಷಿತ್ ಅವರ ಜೀವನದಲ್ಲಿ ಹೊಸ ವಸಂತ ಬಂದಿದೆ ಎನ್ನಬಹುದು. ಸಂಗೀತದಲ್ಲಿ ಒಂದಾಗಿದ್ದ ಈ ಇಬ್ಬರು ಕಲಾವಿದರು ಈಗ ಜೀವನದಲ್ಲೂ ಒಂದಾಗಲು ಸಿದ್ಧರಾಗಿದ್ದಾರೆ. ಇವರ ದಾಂಪತ್ಯವು ಸಂಗೀತ ಲೋಕಕ್ಕೆ ಹೊಸ ಪ್ರೇರಣೆಯಾಗಲಿದೆ ಎಂಬ ನಿರೀಕ್ಷೆಯಿದೆ.

