ರಾಜ್ ಕೋಟ್ : ರಣಜಿ ಟ್ರೋಫಿಯ ಎಲೈಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಶತಕ ಜೊತೆಯಾಟದ ನೆರವಿನಿಂದ ಕರ್ನಾಟಕ ತಂಡವು ಬಲಿಷ್ಠ ಸೌರಾಷ್ಟ್ರ ವಿರುದ್ಧ ಮೊದಲ ದಿನದಲ್ಲೇ ಪಂದ್ಯದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಟಾಸ್ ಗೆದ್ದ ಸೌರಾಷ್ಟ್ರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಕರ್ನಾಟಕಕ್ಕೆ ಸತತ ಎರಡು ವಿಕೆಟ್ ನಷ್ಟವಾದರೂ, ಬಳಿಕ ಪಡಿಕ್ಕಲ್ ಮತ್ತು ಕರುಣ್ ನಾಯರ್ ಜೋಡಿಯ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.
ಆರಂಭಿಕ ಆಟಗಾರರಾಗಿ ನಿಕಿನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಆರಂಭಿಕ ಜೋಡಿ ಸ್ವಲ್ಪ ಸಮಯ ಕ್ರೀಸ್ ನಲ್ಲಿ ನಿಂತು ಎದುರಾಳಿ ತಂಡಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ ಮೈದಾನಕ್ಕಿಳಿದ ಎಡಗೈ ಬ್ಯಾಟರ್ ಪಡಿಕ್ಕಲ್ 11 ಬೌಂಡರಿ ಸಹಿತ 141 ಎಸೆತಗಳಲ್ಲಿ 96 ರನ್ ಗಳಿಸಿ ಶತಕದ ಹತ್ತಿರ ತಲುಪಿ ಶತಕ ವಂಚಿತರಾದರು,

ಬಳಿಕ ಕಣಕ್ಕಿಳಿದ ಕರುಣ್ ನಾಯರ್ 9 ಬೌಂಡರಿ ಸಹಿತ 126 ಎಸೆತಗಳಲ್ಲಿ 73 ರನ್ ಗಳ ಸೊಗಸಾದ ಆಟವಾಡಿದರು. ಪಡಿಕ್ಕಲ್ ಮತ್ತು ಕರುಣ್ ಇವರಿಬ್ಬರ ನಡುವಿನ 146 ರನ್‌ಗಳ ತೃತೀಯ ವಿಕೆಟ್ ಜೊತೆಯಾಟ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ರನ್ ಕಲೆಹಾಕಲು ಸುಲಭವಾಯಿತು.
ನಂತರ ಬ್ಯಾಟ್ ಬೀಸಲು ಬಂದ ಸ್ಮರಣ್ ಮತ್ತು ಶ್ರೇಯಸ್ ಗೋಪಾಲ್ ಅವರ 81 ರನ್‌ಗಳ ಜೊತೆಯಾಟ ಕರ್ನಾಟಕದ ರನ್ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಯಿತು. ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿ ಮುಂದಿನ ದಿನದಾಟಕ್ಕೆ ಕಾಲಿಟ್ಟಿತು.
ಸೌರಾಷ್ಟ್ರ ಪರವಾಗಿ ಬೌಲ್ ಮಾಡಿದ ಸ್ಪಿನ್ನರ್ ಧರ್ಮೇಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಪಡೆದು ಕರ್ನಾಟಕದ ಬ್ಯಾಟರ್ ಗಳನ್ನು ಕಟ್ಟಿಹಾಕಲು ಮುಂದಾದರೂ ಕೂಡ ಫಲ ದೊರೆಯಲಿಲ್ಲ.
ಪಡಿಕ್ಕಲ್ ರವರ ಲಯಬದ್ದ ಬೌಂಡರಿಗಳು ಮತ್ತು ಕರುಣ್ ನಾಯರ್ ಅವರ ಉತ್ತಮ ಬ್ಯಾಟಿಂಗ್ ಶೈಲಿ ಕರ್ನಾಟಕದ ಅಭಿಮಾನಿಗಳಿಗೆ ನಾಳಿನ ಪಂದ್ಯವನ್ನು ನೋಡಲು ಉತ್ಸಾಹ ಭರಿತರಾಗಿ ಕಾಯುವಂತೆ ಮಾಡಿದೆ.

