ಸತ್ಯಕಾಮ ವಾರ್ತೆ ಯಾದಗಿರಿ:
ಐದು ವರ್ಷಗಳಲ್ಲಿ ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ ಎಂದು ನಂಬಿಸಿ, ಗ್ರಾಮದ ಸುಮಾರು 50 ಮಂದಿಯಿಂದ ಒಟ್ಟು ₹21.59 ಲಕ್ಷ ರೂ. ವಂಚಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯಣ್ಣಿವಡಗೇರಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಬಸವರಾಜ @ ಬಸಪ್ಪ ಯಮನಪ್ಪ ಆಶ್ಯಾಳ ಮತ್ತು ಅವನ ಅಣ್ಣ ಮುತ್ತಪ್ಪ ಯಮನಪ್ಪ ಆಶ್ಯಾಳ ಎಂಬವರ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ನಿಂಗಪ್ಪ ದೂಳಪ್ಪ ಪೂಜಾರಿ ನೀಡಿರುವ ದೂರಿನ ಪ್ರಕಾರ, 2013ರಲ್ಲಿ ಆರೋಪಿ ಬಸವರಾಜ ಘರಿಮಾ ಹೋಮ್ ಅಂಡ್ ಫಾರಂ ಹೌಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಇನ್ಸುರೆನ್ಸ್ ಕಂಪನಿ ಪ್ರಾರಂಭಿಸಿ, ಪ್ರತಿ ವರ್ಷ ₹1,250ರಂತೆ ಐದು ವರ್ಷ ಹಣ ಕಟ್ಟಿದರೆ ಹೂಡಿಕೆ ಡಬಲ್ ಆಗುತ್ತದೆ ಎಂದು ಭರವಸೆ ನೀಡಿದ್ದನು.
ಈ ಭರವಸೆ ನಂಬಿ ಗ್ರಾಮದ ಸುಮಾರು 50 ಮಂದಿ ಒಟ್ಟು ₹21.59 ಲಕ್ಷ ರೂ. ಹೂಡಿಕೆ ಮಾಡಿದರು. ಆದರೆ 2019ರಲ್ಲಿ ಅವಧಿ ಮುಗಿದರೂ ಹಣವನ್ನು ಹಿಂತಿರುಗಿಸದೆ ಕಾಲಹರಣ ಮಾಡಿದನು. 2020ರಲ್ಲಿ ಗ್ರಾಮ ಹಿರಿಯರ ಸಮ್ಮುಖದಲ್ಲಿ ನಡೆದ ನ್ಯಾಯಪಂಚಾಯಿತಿಯಲ್ಲೂ ಐದು ವರ್ಷಗಳ ಅವಧಿ ಕೇಳಿ ವಂಚನೆ ಮುಂದುವರಿಸಿದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ದೂರುದಾರರು ಹಣವನ್ನು ಕೇಳಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಅಣ್ಣ ಮುತ್ತಪ್ಪ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ BNS ಕಲಂ 316(2), 318(3), 351(2), 352 ಹಾಗೂ 3(5) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

