ಸತ್ಯಕಾಮ ವಾರ್ತೆ ಸುರಪುರ:
ಕನ್ನಡ ನಾಡು ನುಡಿ ನೆಲ ಜಲದ ಭಾಷೆ ವಿಷಯಕ್ಕಾಗಿ ಎಲ್ಲರೂ ಹೋರಾಟ ಮಾಡಬೇಕು ಎಂದು ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭೀಮು ನಾಯಕ ಕಳೆದ ಅನೇಕ ವರ್ಷಗಳಿಂದ ಕನ್ನಡಪರ ಹೋರಾಟಗಾರನಾಗಿದ್ದು ಮುಂದೆಯೂ ಉತ್ತಮವಾದ ಸಂಘಟನೆಯನ್ನು ಜಿಲ್ಲೆಯಲ್ಲಿ ಬೆಳೆಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ ಮಾತನಾಡಿ, ಕನ್ನಡ ನಾಡು ನುಡಿ ಇಂದು ತುಂಬಾ ಅಪಾಯದಲ್ಲಿದೆ ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕನ್ನಡಿಗರಿಗೆ ಇದ್ದು, ಮ.ರಾ.ಮೂರ್ತಿ, ವಿ.ಕೃ ಗೋಕಾಕ ಡಾ.ರಾಜಕುಮಾರ್,ವಾಟಾಳ
ನಾಗರಾಜ್, ಜಿ ನಾರಾಯಣ ಕುಮಾರ್ ಸೇರಿದಂತೆ ಹಲವು ಮಹನೀಯರು ಕನ್ನಡಕ್ಕಾಗಿ ದುಡಿದಿದ್ದಾರೆ ಅಂತವರಿಂದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಆರಂಭಗೊಂಡಿದೆ ಎಂದರು.
ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಭೀಮು ನಾಯಕ ಮಲ್ಲಿಬಾವಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಬೆಳೆಸುವುದಾಗಿ ತಿಳಿಸಿದರು.
ಪ್ರಸ್ತಾವಿಕವಾಗಿ ಸಾಹಿತಿ ಅಶೋಕ ಚೌಧರಿ ಮಾತನಾಡಿ, 80ರ ದಶಕದಲ್ಲಿ ಕನ್ನಡಕ್ಕೆ ಪಕ್ಕದ ರಾಜ್ಯಗಳ ಭಾಷೆಗಳು ಏರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಜಿ ನಾರಾಯಣ ಕುಮಾರ್ ಅವರು ರಾಜ್ಯದಲ್ಲಿ ಕನ್ನಡಿಗರನ್ನು ಸಂಘಟಿಸುವ ಜೊತೆಗೆ ದೊಡ್ಡಮಟ್ಟದಲ್ಲಿ ಹೋರಾಟವನ್ನು ನಡೆಸಿ ಕನ್ನಡ ಕಾಯುವ ಕೆಲಸವನ್ನು ಮಾಡಿದ್ದಾರೆ ಎಂದರು.
ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಆಗಮಿಸುತ್ತಿದ್ದಂತೆ ನಗರದಲ್ಲಿ ಅದ್ದೂರಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಕೊಟ್ರೇಶ ಚೌಧರಿ ಮಾತನಾಡಿದರು.ಯಲ್ಲಪ್ಪ ನಾಯಕ ಮಲ್ಲಿಬಾವಿ ನೇತೃತ್ವ ವಹಿಸಿದ್ದರು. ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷ್ಮಿ, ಸಮಿತಿಯ ಮುಖಂಡ ರಾಜಣ್ಣ ಉಪಸ್ಥಿತರಿದ್ದರು.ಮಹೇಶ ಗಂಜಿ ಸ್ವಾಗತಿಸಿ ನಿರೂಪಿಸಿದರು, ಪತ್ರಕರ್ತ ಪರಶುರಾಮ ಮಲ್ಲಿಬಾವಿ ವಂದಿಸಿದರು. ಸಂಘಟನೆಯ ಅನೇಕ ಮುಖಂಡರು ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.
ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ಭೀಮು ಹೆಚ್.ನಾಯಕ ಅವರನ್ನು ನೇಮಕಗೊಳಿಸಿ ನೇಮಕಾತಿ ಪತ್ರವನ್ನು ಸ್ವಾಮೀಜಿಗಳ ಮೂಲಕ ನೀಡಿ ಗೌರವಿಸಲಾಯಿತು. |
---|

