ಯಾದಗಿರಿ: ಇಲ್ಲಿನ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ ಮಾಣಿಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ನಿವಾಸಿ ಶಶಿಕುಮಾರ್ ಜ್ಞಾನಮಿತ್ರ ಅವರ ದೂರು ಆಧರಿಸಿ ದಾಳಿ ನಡೆಸಲಾಗಿದೆ. ದೂರುದಾರರಿಗೆ ಇ–ಖಾತಾ ಮಾಡಿಕೊಡಲು ನರಸಪ್ಪ ಅವರು ಹಲವಾರು ಬಾರಿ ಕಚೇರಿಗೆ ಅಲೆದಾಡಿಸಿದರು ಮತ್ತು ₹8 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಕೋರ್ಟ್ ಮುಂಭಾಗದ ರಸ್ತೆಯ ಬದಿಯಲ್ಲಿ ₹5 ಸಾವಿರ ಲಂಚದ ಹಣವನ್ನು ಫೋನ್‌ಪೇ ಮೂಲಕ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಿಲ್ ಕಲೆಕ್ಟರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

