ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲೆಯ ವಡಗೇರಾ ತಾಲೂಕಿನ ಭೀಮಾನದಿ ತೀರದ ಹಲವು ಗ್ರಾಮಗಳಲ್ಲಿ ಪ್ರವಾಹದಿಂದ ಬೆಳೆ ಹಾನಿ ಸಂಭವಿಸಿದ್ದು, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಂಗಳವಾರ ಜೋಳದಡಗಿ ಹಾಗೂ ಶಿವನೂರು ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು.
ಮೊದಲು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಿದರು. ಈ ವೇಳೆ ಜೋಳದಡಗಿ ಗ್ರಾಮದ ರೈತ ದೇವೇಂದ್ರಪ್ಪ ಪೂಜಾರಿ, ಗೌಡರೆ ನೀರು ಬಂದು ನನ್ನ 4 ಎಕರೆ ಭತ್ತದ ಬೆಳೆ ನೀರಾಗ ಹೋಗ್ಯಾದ.ಪ್ರತಿ ವರ್ಷ ಇದೆ ಪರಿಸ್ಥಿತಿ ಆಗ್ಯಾದ್ ಎಂದು ನೋವು ತೊಡಿಕೊಂಡರು. ಅದೇ ರೀತಿ ರೈತ ಮಹಿಳೆ ಲಕ್ಷ್ಮಿ ಸಹ ಹಾನಿ ಕುರಿತು ಶಾಸಕರಿಗೆ ಕಷ್ಟ ತೊಡಿಕೊಂಡರು.
ನಂತರ ಶಿವನೂರು ಗ್ರಾಮದಲ್ಲಿ ಭತ್ತ ಹಾಗೂ ಹತ್ತಿ ಬೆಳೆ ಹಾನಿ ವೀಕ್ಷಿಸಿದ ಶಾಸಕರು, ರೈತರ ಮನವಿಗಳನ್ನು ಆಲಿಸಿದರು. ರೈತ ಹಂಪಯ್ಯ ಮಾತನಾಡಿ ಕಳೆದ ವರ್ಷ ಪರಿಹಾರ ತುಂಬಾ ಕಡಿಮೆಯಿತ್ತು. ಈ ಬಾರಿ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು, ನಮ್ಮ ಸರಕಾರ ಸದಾ ರೈತರ ಪರವಾಗಿಯೇ ಕಾರ್ಯನಿರ್ವಹಿಸಿದೆ. ಸುಮಾರು 3.5 ಲಕ್ಷ ಕ್ಯೂಸೆಕ್ ನೀರು ಬಿಡಲ್ಪಟ್ಟ ಕಾರಣ 22 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಮಗ್ರ ಸಮೀಕ್ಷೆ ಮಾಡಿ ಯಾವುದೇ ರೈತರ ಜಮೀನು ಮಿಸ್ ಆಗದಂತೆ ನೋಡಿಕೊಳ್ಳಬೇಕು. ಶೀಘ್ರದಲ್ಲೇ ಸೂಕ್ತ ಪರಿಹಾರ ದೊರಕುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಶಿವನೂರು ಗ್ರಾಮ ಪ್ರವಾಹ ಪೀಡಿತ ಪ್ರದೇಶವಾಗಿರುವುದರಿಂದ ಭವಿಷ್ಯದಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆಯೂ ಕೈಗೊಳ್ಳಲಾಗುತ್ತದೆ. ತಾತ್ಕಾಲಿಕವಾಗಿ ಹೆಚ್ಚಿನ ನೀರು ಬಂದರೆ ಕಾಳಜಿ ಕೇಂದ್ರಗಳಿಗೆ ಗ್ರಾಮಸ್ಥರನ್ನು ಕರೆದೊಯ್ಯಲಾಗುತ್ತದೆ ಎಂದರು.
ಈ ವೇಳೆ ವಡಗೇರಾ ತಹಶಿಲ್ದಾರ ಮಂಗಳಾ,ತಾಪಂ ಇಓ ಮಲ್ಲಿಕಾರ್ಜುನ ಸಂಗ್ವಾರ, ಡಿವೈಎಸ್ಪಿ ಸುರೇಶ್, ಪಶುಸಂಗೋಪನೆ ಇಲಾಖೆ ಡಿಡಿ ರಾಜು ದೇಶಮುಖ, ವೆಂಕಟರೆಡ್ಡಿ ಪಾಟೀಲ, ಶಂಕರಗೌಡ ಪಾಟೀಲ,ಬಾಪುಗೌಡ ಮಾಚನೂರು,ಸಿದ್ದಪ್ಪಗೌಡ ಸೋಮಯ್ಯ ಸ್ವಾಮಿ ಸೇರಿದಂತೆ ಅನೇಕರು ಇದ್ದರು.

