ಸತ್ಯಕಾಮ ವಾರ್ತೆ ಯಾದಗಿರಿ:
ನಗರದ ವಕೀಲರೊಬ್ಬರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು ಅಂತರಜಾಲದ ಮೂಲಕ ರೂ. 3.37 ಲಕ್ಷ ಮೊತ್ತವನ್ನು ವಂಚಿಸಿರುವ ಪ್ರಕರಣ ಯಾದಗಿರಿ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ ಅಪರಾಧ (ಸಿ.ಇ.ಎನ್) ಠಾಣೆಯಲ್ಲಿ ದಾಖಲಾಗಿದೆ.
ಮಾತಾ ಮಾಣಿಕೇಶ್ವರಿ ನಗರದ ನಿವಾಸಿ, ವೃತ್ತಿಯಲ್ಲಿ ವಕೀಲರಾದ ಬಸವರಾಜ ಆರ್. ಹಾಲಗೇರ್ (48) ಅವರು ಸಲ್ಲಿಸಿದ ದೂರಿನ ಪ್ರಕಾರ ಆಗಸ್ಟ್ 04 ರಂದು ಅವರ ಮೊಬೈಲ್ ನಂಬರ ಇದ್ದಕ್ಕಿದ್ದಂತೆ ನಿಷ್ಕ್ರಿಯಗೊಂಡಿತು. ನಂತರ ಆಧಾರ್ OTP ಬರದೆ ಸಮಸ್ಯೆ ಎದುರಾದ್ದರಿಂದ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಆ. 06 ಮತ್ತು 07 ರಂದು ಅನಾಮಿಕರು ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2 ಲಕ್ಷ ರೂ., 1.17 ಲಕ್ಷ ರೂ., 19,500 ರೂ. ಹಾಗೂ 700 ರೂ. ಮೊತ್ತವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆಯ ನಂತರ ಬಸವರಾಜ ಅವರು ತಕ್ಷಣವೇ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ದಾಖಲಿಸಿದ್ದು, ನಂತರ ಬ್ಯಾಂಕ್‌ಗೆ ಲಿಖಿತ ಅರ್ಜಿ ಸಲ್ಲಿಸಿ ತಮ್ಮ ಖಾತೆ ಬಂದ್ ಮಾಡಿಕೊಂಡಿದ್ದಾರೆ.
ಆ. 27 ರಂದು ವಕೀಲ ಬಸವರಾಜ ಅವರು ಸ್ವತಃ ಸಿ.ಇ.ಎನ್ ಠಾಣೆಗೆ ತೆರಳಿ ಗಣಕೀಕೃತ ದೂರು ಸಲ್ಲಿಸಿದ್ದು, ಪೊಲೀಸರು ಗುನ್ನೆ ನಂ. 21/2025ರಲ್ಲಿ ಐಟಿ ಕಾಯ್ದೆ ಸೆಕ್ಷನ್ 66(D) ಹಾಗೂ ಬಿಎನ್‌ಎಸ್ ಕಾಯ್ದೆ ಸೆಕ್ಷನ್ 318(4), 319 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

