ಸತ್ಯಕಾಮ ವಾರ್ತೆ ಯಾದಗಿರಿ :
ಯಾದಗಿರಿ ನಗರದ ಹೊರವಲಯದಲ್ಲಿರುವ ಭಗವಾನ್ ಮಹಾವೀರ ಜೈನ್ ಗೋಶಾಲಾದಲ್ಲಿ ಸಾಕಿದ್ದ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಮೂಲಗಳ ಮಾಹಿತಿ ಪ್ರಕಾರ, ಪಕ್ಕದ ಜಮೀನಿನಲ್ಲಿ ಸಿಕ್ಕಿದ್ದ ಜಿಂಕೆಯನ್ನು ಗೋಶಾಲಾ ಸಿಬ್ಬಂದಿಗಳು ಕಳೆದ ಒಂದು ವರ್ಷದಿಂದ ಸಾಕುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಜಿಂಕೆ ಪತ್ತೆಯಾಗಿದೆ.
ಜಿಂಕೆಯನ್ನು ವಶಕ್ಕೆ ಪಡೆಯುವ ವೇಳೆ ಗೋಶಾಲಾ ಸಿಬ್ಬಂದಿಗಳು ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯವೂ ಅಲ್ಲಿ ಕಂಡುಬಂದಿತು. ಆದಾಗ್ಯೂ, ಅರಣ್ಯ ಕಾಯ್ದೆ ಪ್ರಕಾರ ಕಾಡುಪ್ರಾಣಿಗಳನ್ನು ಮನೆಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ಸಾಕುವುದು ಕಾನೂನು ಬಾಹಿರವಾಗಿರುವುದರಿಂದ ಅಧಿಕಾರಿಗಳು ಜಿಂಕೆಯನ್ನು ವಶಕ್ಕೆ ಪಡೆದು ಎಲೆರಿ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರ ನಡುವೆ, ಜಿಂಕೆ ಗೋಶಾಲೆಯಲ್ಲಿ ಗೋಪ್ಯವಾಗಿ ಇಟ್ಟ ಗೋಶಾಲೆಯ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗಿತ್ತು ಎಂಬ ಸಾರ್ವಜನಿಕರ ಬೇಡಿಕೆ ವ್ಯಕ್ತವಾಗಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

