ಸತ್ಯಕಾಮ ವಾರ್ತೆ ಯಾದಗಿರಿ:
ಪ್ರತಿ ತಿಂಗಳು ಕನಿಷ್ಠ ₹10,000 ಗೌರವಧನ ನೀಡಬೇಕು ಮತ್ತು ಪ್ರೋತ್ಸಾಹಧನ ಸೇರಿಸಿ ಏಪ್ರಿಲ್ 2025ರಿಂದ ಜಾರಿಗೆ ತರಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಯಾದಗಿರಿ ಜಿಲ್ಲಾ ಸಮಿತಿಯ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ಜಿಲ್ಲಾಧ್ಯಕ್ಷೆ ಡಿ. ಉಮಾದೇವಿ ಮಾತನಾಡಿ, ಜನವರಿಯಲ್ಲಿ ಬೆಂಗಳೂರು ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹10,000 ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರೂ, ಅದು ಈವರೆಗೂ ಜಾರಿಯಾಗಿಲ್ಲವೆಂದು ಆರೋಪಿಸಿದರು. ಬಜೆಟ್ ನಲ್ಲೂ ಸಹ ಘೋಷಣೆ ಮಾಡದೆ ನಮಗೆ ಮೋಸ ಮಾಡಿದ್ದಾರೆ. ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅದಕ್ಕಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ. ಘೋಷಣೆ ಮಾಡಿದ ೧೦ ಸಾವಿರ ಗೌರವಧನವನ್ನು ಕೂಡಲೇ ಜಾರಿಗೆ ತರಬೇಕು, ಇಲ್ಲದಿದ್ದರೆ ತೀವ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಾರ್ಯದರ್ಶಿ ದೇವಕ್ಕಿ ವನದುರ್ಗ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಪುಷ್ಪಲತಾ, ನೀಲಮ್ಮ, ತಾಯಮ್ಮ, ಶಾಂತವ್ವ, ನಿಂಗಮ್ಮ, ಅಮೃತ, ದಾನಮ್ಮ, ಗೀತಾ, ಮೀನಾಕ್ಷಿ, ಗೌರಮ್ಮ, ಶಾರದಾದೇವಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಧರಣಿಯಲ್ಲಿ ಭಾಗವಹಿಸಿದರು.

