ಕಿಲ್ಲನಕೇರಾ: ಒಣಬೇಸಾಯಕ್ಕೆ ಅನುಕೂಲವಾಗುವಂತೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರ ಜಾರಿಗೆ ತಂದಿದ್ದ ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಕಿಲ್ಲನಕೇರಾ ಗ್ರಾಮದಲ್ಲಿ ವಿಫಲವಾಗಿದೆ. ಸಣ್ಣ ನೀರಾವರಿ ಇಲಾಖೆಯ ಅವೈಜ್ಞಾನಿಕ ನಿರ್ಮಾಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕೆರೆಗೆ ನೀರು ಸೇರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ನೇತೃತ್ವದಲ್ಲಿ ರೈತರು ಕೆರೆಯ ತೀರದಲ್ಲಿ ಪ್ರತಿಭಟನೆ ನಡೆಸಿ, ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು. ಯೋಜನೆ ಇದ್ದೂ, ನೀರು ಬಂದಿಲ್ಲ; ಅಧಿಕಾರಿಗಳ ನಿರ್ಧಾರದಿಂದ ರೈತರ ಜೀವನ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭರ್ಜರಿ ಮಳೆಯಿಂದ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ತುಂಬಿ ಹರಿಯುತ್ತಿದ್ದರೂ, ಕಿಲ್ಲನಕೇರಾ ಗ್ರಾಮದ ಮೂರು ಕೆರೆಗಳು ಖಾಲಿಯಾಗಿವೆ. ಕೆರೆಗೆ ಪೈಪ್‌ಲೈನ್ ಇದ್ದರೂ, ಕೆಲವರ ಅರ್ಜಿಯ ಆಧಾರದಲ್ಲಿ ಇಲಾಖೆಯವರು ನೀರು ಬಿಡದೇ ತಡೆಹಿಡಿದಿರುವುದಾಗಿ ರೈತರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಮರೆಪ್ಪ ನಾಟೇಕಾರ ಸೇರಿದಂತೆ ಅನೇಕ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

