ಯಾದಗಿರಿ (ಗುರುಮಠಕಲ್) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳು ಹಾಗೂ ತಾಯಂದಿರಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳ ತಯಾರಿಕಾ ಘಟಕದಲ್ಲಿ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಲವೀಶ್ ಒರ್ಡಿಯಾ ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಯಾದಗಿರಿಯಲ್ಲಿರುವ ಗುರುಮಠಕಲ್ ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅವರು ಯಂತ್ರಗಳ ಸಹಾಯದಿಂದ ಮಕ್ಕಳಿಗೆ ನೀಡಲಾಗುವ ಪೌಷ್ಟಿಕಾಂಶ ಆಹಾರಗಳ ತಯಾರಿಕೆಯನ್ನು ವೀಕ್ಷಿಸಿದರು.
ಮಹಿಳೆಯರ ತಂಡ ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಪೌಷ್ಟಿಕಾಂಶಗಳನ್ನು ಉತ್ಪಾದಿಸುವ ರೀತಿಯನ್ನು ಪರಿಶೀಲಿಸಿದರು. ಅಕ್ಕಿ, ಗೋದಿ, ಹೆಸರು ಬೇಳೆ, ಹೆಸರು ಕಾಳು, ಕಡಲೇ ಬೇಳೆ, ಬೆಲ್ಲ, ಎಣ್ಣೆ ಮುಂತಾದ ವಸ್ತುಗಳ ವರ್ಗೀಕರಣ ಮಾಡುವ ವಿಧಾನವನ್ನೂ ಪರಿಶೀಲಿಸಿದರು. ಆಹಾರ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸಿ, ಕಚ್ಚಾವಸ್ತುಗಳ ದಾಸ್ತಾನು ಕ್ರಮವನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.
ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕದಲ್ಲಿ ಶುಚಿತ್ವ ಹಾಗೂ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಕುರಿತು ಸಮಾಧಾನ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖಾ ಉಪ ನಿರ್ದೇಶಕ ತಿಪ್ಪಣ್ಣ ಶಿರಸಿಗಿ ಹಾಗೂ ಅಧಿಕಾರಿ ಭೀಮರಾಯ, ಗುರುಮಠಕಲ್ ಸಿ. ಡಿ. ಪಿ. ಓ ಶರಣಬಸವ, ಶಿಶು ಅಭಿವೃದಿ ಯೋಜನಾ ಅಧಿಕಾರಿಗಳು ಸೇರಿದಂತೆ ಮಹಿಳಾ ಪೂರಕ ಉತ್ಪಾದನಾ ಘಟಕದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

