ಸತ್ಯಕಾಮ ವಾರ್ತೆ ಯಾದಗಿರಿ:
ತಾಲ್ಲೂಕಿನ ಮುಂಡರಗಿ ಗ್ರಾಮ ಹೊರವಲಯದ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಿಂದ 14 ನೇ ವರ್ಷದ ಜಾತ್ರೆ ಜರುಗಿತು.
ಮಠದ ಪೀಠಾಧಿಪತಿ ಶಿವ ಚಂದ್ರಶೇಖರ ಮುತ್ಯಾ ಮಾತನಾಡಿ ಪ್ರತಿವರ್ಷದಂತೆ ಮಠದಲ್ಲಿ ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ದೂರದ ಊರುಗಳಿಂದ ಆಗಮಿಸಿ ನಾಗಲಿಂಗೇಶ್ವರ ದರ್ಶನ ಮಾಡುವರು. ಜಾತ್ರೆಯ ಪೂರ್ವದಿನ ರಾತ್ರಿ ಭಜನೆ ಕಾರ್ಯಕ್ರಮ, ಬೆಳಿಗ್ಗೆ ಮುಂಡರಗಿ ಗ್ರಾಮದ ದ್ಯಾಮವ್ವ ದೇವಸ್ಥಾನಕ್ಕೆ ತೆರಳಿ ಉಡಿ ತುಂಬುವ ಕಾರ್ಯಕ್ರಮ, ಗಂಗಾ ಸ್ನಾನ, ನಾಗರ ಹುತ್ತಕ್ಕೆ ಪೂಜೆ, ಹಾಗೂ ನಿಜ ನಾಗರಕ್ಕೆ ಹಾಲುಣಿಸುವುದು ವಾಡಿಕೆ. ಜಾತ್ರೆಯಲ್ಲಿ ಹಲಗೆ ಕುಣಿತ, ಡೊಳ್ಳು ಕುಣಿತ, ಕೈ ಕುಸ್ತಿ ಪಂದ್ಯಗಳು ಜರುಗುತ್ತವೆ, ವಿಶೇಷ ಪೂಜೆಗಳು ನೆರವೇರುತ್ತವೆ ಎಂದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ್ ಮಾತನಾಡಿ ನಮ್ಮ ಸನಾತನ ಧರ್ಮವು ಮನುಷ್ಯನಿಗೆ ಭಯ, ಭಕ್ತಿ, ನಂಬಿಕೆ, ದಾನ, ಧರ್ಮ, ಸಂಸ್ಕೃತಿ, ಸಂಸ್ಕಾರ ಗಳು ಇದ್ದಾಗಲೇ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ, ನಾವು ಕೂಡ ಹಲವು ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತೇವೆ ವಿಶೇಷವಾಗಿ ನಾಗರ ಪಂಚಮಿ ಪ್ರಯುಕ್ತ ನಮ್ಮ ಭಾಗದ ಕಂದಕೂರು ಗ್ರಾಮದ ಬೆಟ್ಟದ ಕೊಂಡಮ್ಮಾಯಿ ಜಾತ್ರೆವೇಳೆಯಲ್ಲಿ ರಾಶಿಗಟ್ಟಲೇ ಸಾವಿರಾರು ಹಾವು, ಚೇಳುಗಳು ಹೊರಬಂದು, ಜನರೆಲ್ಲ ಅವುಗಳಿಂದ ಆಟವಾಡುವುದು ಸಾಮಾನ್ಯ ಮಾತಲ್ಲ. ಅಂತೆಯೇ ಹುತ್ತದಲ್ಲಿನ ನಿಜ ನಾಗರ ಹಾವನ್ನು ಹೊರತೆಗೆದು ಹಾಲುಣಿಸುವುದು ದೈವತ್ವದ ಮಾತು ಎಂದರು.
ಕಾರ್ಯಕ್ರಮದಲ್ಲಿ ಹಳಿಗೇರ ಪೀಠದ ಹಣಮಂತ್ರಾಯ ಮುತ್ಯಾ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ರಮೇಶ್ ಕೋಟಿಮನಿ, ಶ್ರೀಧರ್ ಮಹಾಂತೇಶ್, ಅಶೋಕ್ ರೆಡ್ಡಿ ಎಲೇರಿ, ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ್ ಸ್ವಾಮಿಗಳಿಂದ ಆಶೀರ್ವಾದ ಪಡೆದರು.

