- ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ : ಕಾಸಿಯಾ
ಸತ್ಯಕಾಮ ವಾರ್ತೆ ಯಾದಗಿರಿ:
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, “ರಫ್ತು, ಲೀನ್ ಯೋಜನೆ ಮತ್ತು ಝಡ್ ಪ್ರಮಾಣೀಕರಣ” ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇದೇ 29 ರಂದು ನಗರದ ಎಸ್.ಡಿ.ಎನ್. ರೆಸಿಡೆನ್ಸಿ (ಸರ್ಕಾರಿ ಪದವಿ ಕಾಲೇಜು ಹತ್ತಿರ)ನಲ್ಲಿ ಬೆಳಿಗ್ಗೆ 10.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಕಾರ್ಯಕ್ರಮವು ಎಂ.ಎಸ್.ಎಂ.ಇ.ಗಳ ಸ್ಪರ್ಧಾತ್ಮಕತೆ, ಉತ್ಪಾದನಾ ದಕ್ಷತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಭಾರತ ಸರ್ಕಾರದ ವಾಣಿಜ್ಯ ಇಲಾಖೆ ಪ್ರೇರಿತ ಡಿಸ್ಟ್ರಿಕ್ಟ್ಸ್ ಅಸ್ ಎಕ್ಸ್ಪೋರ್ಟ್ ಹಬ್ಸ್ (DEH) ಉಪಕ್ರಮವು ಜಿಲ್ಲೆಯ ಮಟ್ಟದಲ್ಲಿ ರಫ್ತು ಉತ್ತೇಜನ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆ ಬೆಳೆಸುವ ಗುರಿ ಹೊಂದಿದ್ದು, ಈ ಕಾರ್ಯಗಾರವೂ ಅದಕ್ಕೆ ಅನುಗುಣವಾಗಿದೆ ಎಂದರು.
ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಉದ್ಘಾಟನೆ ನೆರವೇರಿಸಲಿದ್ದು, ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಅತಿಥಿಗಳಾಗಿ ವಿ.ಟಿ.ಪಿ.ಸಿ. ಕಲಬುರಗಿ ಶಾಖಾ ಕಛೇರಿ ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ, ಯಾದಗಿರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೆಶಕ ಬಿ. ಸತೀಶ್‌ಕುಮಾರ್, ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ದಿನೇಶ್ ಕುಮಾರ್ ಜೈನ್, ರೈಸ್ ಮಿಲ್ ಅಸೋಸಿಯೇಶನ್ ಯಾದಗಿರಿ ಅಧ್ಯಕ್ಷ ಹನುಮದಾಸ್ ಮುಂದಡಾ, ಸುರಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಚೆಟ್ಟಿ, ಯಾದಗಿರಿ ಜಿಲ್ಲಾ ಹತ್ತಿ ಜಿನ್ನಿಂಗ್ ಮಿಲ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಗುರು ಮಣಿಕಂಟ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ.ಗಳಿಗೆ ಉತ್ಪಾದನಾ ವೆಚ್ಚ ಕಡಿತ, ಗುಣಮಟ್ಟ ಸುಧಾರಣೆ ಮತ್ತು ಸಾಮರ್ಥ್ಯ ವೃದ್ಧಿಗೆ ನೆರವಾಗುವಂತೆ ರೂಪಿಸಲಾದ ಲೀನ್ ತಂತ್ರಗಳ ಕುರಿತು. ಹಾಗೂ ಶೂನ್ಯ ದೋಷ, ಶೂನ್ಯ ಪರಿಸರ ಹಾನಿಯತ್ತ ಎಂ.ಎಸ್.ಎಂ.ಇ.ಗಳನ್ನು ಒತ್ತಾಯಿಸುವ ಚಟುವಟಿಕೆ. ಮೌಲ್ಯಮಾಪನ, ತಾಂತ್ರಿಕ ಸಹಾಯ ಹಾಗೂ ಉತ್ತಮ ತಂತ್ರಗಳನ್ನು ಅಳವಡಿಸಲು ಝಡ್ ಪ್ರಮಾಣೀಕರಣ ಬಗ್ಗೆ ಮಾಹಿತಿ ಹಾಗೂ ಸ್ಥಳದಲ್ಲೇ ನೋಂದಣಿ ಸೌಲಭ್ಯವೂ ಲಭ್ಯವಿರುತ್ತದೆ. ಹೀಗಾಗಿ ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.

