- ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಬದಲಾವಣೆಗೆ ಸೂಚನೆ
- ಮಕ್ಕಳಿಂದ ಸಮಸ್ಯೆ ಆಲಿಕೆ – ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ.
ಸತ್ಯಕಾಮ ವಾರ್ತೆ ಯಾದಗಿರಿ:
ಮಕ್ಕಳಿಂದಲೇ ಶೌಚಾಲಯ ಸ್ವಚ್ಛಗೊಳಿಸಲಾಗಿದೆ ಎಂದು ಇದೇ ಬುಧವಾರ 16 ರಂದು ಪತ್ರಿಕೆಯಲ್ಲಿ ಸುದ್ದಿಯಾಗಿದ್ದ ತಾಲೂಕಿನ ಅರಕೇರಾ(ಕೆ) ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ಶನಿವಾರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಭೇಟಿ ನೀಡಿ ಅಲ್ಲಿನ ಎಲ್ಲವೂ ಸಮಗ್ರ ಪರಿಶೀಲನೆ ನಡೆಸಿದರು.
ವಸತಿ ನಿಲಯ, ಅಡುಗೆ ಕೋಣೆ, ಶೌಚಾಲಯ ಸ್ಥಳ, ಶಾಲಾ ಕೋಣೆ ಹೀಗೆ ಎಲ್ಲ ಕಡೆ ಸಂಚರಿಸಿ ಅಲ್ಲಿನ ಪೂರಕ ವಾತವರಣ ವಿಕ್ಷೀಕಿಸಿದರು.
ಇದೇ ವೇಳೆ ವಸತಿ ನಿಲಯದ ಮಕ್ಕಳನ್ನು ಮಾತನಾಡಿಸಿದ ನ್ಯಾಯಾಧೀಶರಾದ ಮರಿಯಪ್ಪ ಅವರಿಗೆ ಮಕ್ಕಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಕಣ್ಣಿಗೆ ಕಟ್ಟಿದಂತಾದವು. ಶೌಚಾಲಯ ಶುಚಿಗೊಳಿಸಲು ಯಾರು ಇಲ್ಲ. ಕಳೆದ ಫೆಬ್ರವರಿ ತಿಂಗಳಿಂದ ಮಾಸಿಕವಾಗಿ ನೀಡುವ ಉಪಯುಕ್ತ ವಸ್ತುಗಳ ಕಿಟ್ ವಿತರಿಸಿಲ್ಲ, ತರಕಾರಿ ಎಲ್ಲೆಂದರಲ್ಲಿ ಚೆಲ್ಲುವ ವಿಷಯ, ಕೆಟ್ಟಿರುವ ಇನ್ನವೇಟರ್, ಗುಡ್ಡಕ್ಕೆ ಹೊಂದಿಕೊಂಡಿರುವ ಈ ಸ್ಥಳಕ್ಕೆ ಆಗಾಗ ಕಾಣಿಸಿಕೊಳ್ಳುವ ಹಾವು, ಚೇಳುಗಳು, ಕಸದ ರಾಶಿ ಹಾಕಿರುವ ಬಗ್ಗೆ ಹೀಗೆ ಹಲವು ಸಮಸ್ಯೆಗಳು ಮಕ್ಕಳಿಂದ ಕೇಳಿದ ಅವರು ಕೆಲ ಕಾಲ ದಂಗಾದರು.
- Advertisement -
ಈ ಎಲ್ಲವೂ ಕೇಳಿಸಿಕೊಂಡ ಅವರು, ಈ ಸಮಸ್ಯೆಗಳ ನಡುವೆ ಮಕ್ಕಳು ಹೇಗೆ ಇರಬೇಕು, ಹೇಗೆ ಅಭ್ಯಾಸ ಮಾಡಬೇಕೆಂದು ಪ್ರಶ್ನಿಸಿ, ಇದೆಲ್ಲವೂ ಒಂದು ವಾರದಲ್ಲಿ ಬಗೆಹರಿಸಬೇಕೆಂದು ಡಿಡಿಪಿಐ ಸಿ.ಎಸ್.ಮುದೋಳ್ ಅವರಿಗೆ ಸೂಚಿಸಿದರು.
ಈ ವಸತಿ ಸಹಿತ ಶಾಲಾ ಕಟ್ಟಡ ಮತ್ತು ವಾತವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಧಿಶರು, ಇದರ ಉಸ್ತುವಾರಿ ಸರಿಯಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಒಗ್ಗಟನಿಂದ ಇದ್ದು ಎಲ್ಲವೂ ಕೆಲಸ ಮಾಡಿ, ಆದರೆ ಆ ವಾತವರಣ ಇಲ್ಲಿ ಕಾಣಿಸುತ್ತಿಲ್ಲ ಎಂದರು. ಇಲ್ಲಿನ ಉಸ್ತುವಾರಿಗಳಾದವರೂ ಎಲ್ಲವೂ ಗಮನಿಸಿ ಮಕ್ಕಳ ಹಿತ ಕಾಪಾಡಬೇಕೆಂದರು.
ಒಂದು ವಾರದ ನಂತರ ಮತ್ತೇ ಭೇಟಿ ನೀಡುತ್ತೆನೆ. ಅಷ್ಟರಲ್ಲಿಯೇ ಎಲ್ಲವೂ ಸರಿ ಆಗಬೇಕೆಂದು ಮರಿಯಪ್ಪ ಹೇಳಿದರು.
ಇದೇ ವೇಳೆ ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಕಾರ್ಯವೈಖರಿ ತೀರಾ ಅಸಮರ್ಪಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ಇಬ್ಬರ ಬದಲಾವಣೆಗೆ DDPI ಯವರಿಗೆ ಸೂಚನೆ ನೀಡಿಲಾಗಿದೆ ಎಂದು ತಿಳಿದು ಬಂದಿದೆ.
ಡಿಡಿಪಿಐ ಸಿ.ಎಸ್.ಮುದೋಳ್, ಬಿಇಒ ಜಾನೆ, ಬಿಆರ್ ಸಿ, ಮುಖ್ಯಗುರು ನಿವೇದಿತಾ ಪಟ್ಟೇದಾರ, ಎಸ್ ಡಿಎಸ್ ಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆಯೇ ಇತರರಿದ್ದರು.
- Advertisement -
—
ಕಿಟ್ ಗಳ ವಿತರಣೆ.
ಸ್ಥಳದಲ್ಲಿಯೆ ಕಿಟ್ ಗಳ ವ್ಯವಸ್ಥೆ ಮಾಡಿದ ಡಿಡಿಪಿಐ ಮುದೋಳ್ ಅವರು, ಶೌಚಾಲಯ ಸ್ವಚ್ಚತೆಗೆ ನೇಮಕ ಮಾಡಿಕೊಳ್ಳಲಾಗುವುದೆಂದರು.
- Advertisement -
ಆಯುಕ್ತರಿಗೆ ವರದಿ ಸಲ್ಲಿಕೆ.
ಮಕ್ಕಳಿಂದ ಶೌಚಾಲಯ ಸ್ವಚ್ಚತೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆಯೇ ವರದಿ ತರಿಸಿ ಸೂಕ್ತ ಕ್ರಮಕ್ಕಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಲಾಗಿದೆ.
ಸಿ.ಎಸ್.ಮುದೋಳ್
ಡಿಡಿಪಿಐ ಯಾದಗಿರಿ.

