ಸತ್ಯಕಾಮ ವಾರ್ತೆ ಗುರುಮಠಕಲ್:
ಪಟ್ಟಣದ ಮೂಲಕ ಹಾದು ಹೋಗುವ ಸಿಂದಗಿ – ಕೊಡಂಗಲ್ ರಾಜ್ಯ ಹೆದ್ದಾರಿ -15 ರಲ್ಲಿ ನಡೆಯುತ್ತಿರುವ ವಿಭಜಕ ಕಾಮಗಾರಿಯಲ್ಲಿ ಮೇಲ್ನೋಟಕ್ಕೆ ಗುಣಮಟ್ಟತೆ ಕಾಣದಾಗಿದ್ದು, ಕ್ರಿಯಾ ಯೋಜನಾ ಪಟ್ಟಿ ನೀಡುವಂತೆ ಕೋರಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗೇಶ್ ಗದ್ದಿಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, ಜಿಲ್ಲಾ ನಾಗರಾಭಿವೃದ್ಧಿ ಕೋಶ ನಗರೋತ್ಥಾನ ಯೋಜನಾ ಭಾಗವಾಗಿರುವ ವಿಭಜಕ (ಡಿವೈಡರ್) ಕಾಮಗಾರಿಯು ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದು ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು, ಕಾಮಗಾರಿಗಳಲ್ಲಿ ಅನೇಕ ಲೋಪಗಳು ಕಂಡರೂ ಸಂಬಂಧ ಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
- Advertisement -
ಏನಿದು ಯೋಜನೆ: ನಗರೋತ್ಥಾನ ಯೋಜನೆ ಅಡಿಯಲ್ಲಿ ಜರುಗುತ್ತಿರುವ ವಿಭಜಕ ಕಾಮಗಾರಿಯಲ್ಲಿ ಸ್ಟೀಲ್ ಕಡಿಮೆ ಪ್ರಮಾಣದಲ್ಲಿ ಬಳಸಿದ್ದನ್ನು ಖುದ್ದಾಗಿ ಕಂಡು ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಪ್ರಶ್ನಿಸಲಾಗಿ ನಮಗೆ ಇಷ್ಟೇ ಪ್ರಮಾಣದಲ್ಲಿ ಬಳಸುವಂತೆ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಕಡಿಮೆ ಪ್ರಮಾಣದ ಸ್ಟೀಲ್ ಬಳಸುತ್ತಿದ್ದು ಉಪಯುಕ್ತತೆಗಿಂತ 20-30% ಸ್ಟೀಲ್ ಕಡಿಮೆ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗುತ್ತಿದ್ದೂ ಕ್ರಿಯಾ ಯೋಜನೆಯ ಪಟ್ಟಿ ನೀಡಲು ಹಲವಾರು ಬಾರಿ ಕೇಳಿದರು ಕೊಡದೆ ಇರವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ ಎಂದರು.
ಅಧಿಕಾರಿಗಳ ಜಾಣ ಕುರುಡು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿರುವ ಕಾಮಗಾರಿಗಳನ್ನು ಸಂಬಂಧಿಸಿದ ಗುತ್ತಿಗೆದಾರರು ಗುಣಮಟ್ಟದಿಂದ ಮಾಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ, ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಬೇಜವಾಬ್ದಾರಿ ತೋರಿಸಿ ಸ್ಥಳಕ್ಕೆ ಆಗಮಿಸದೆ ಅಸಡ್ಡೆ ಉತ್ತರಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಕುಲಂಕುಷವಾಗಿ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಕಳಪೆ ಕಂಡು ಬಂದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳು ಸಂಚಾರಿಸಲಿದ್ದು ಕಡಿಮೆ ಗುಣಮಟ್ಟದ ಕಾಮಗಾರಿ ಮುಂದಿನ ದಿನಗಳಲ್ಲಿ ಅನಾಹುತಗಳಿಗೆ ಎಡೆಮಾಡಲಿದೆ ಎಂದರು.
ಈ ಸಂಧರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ನಾರಾಯಣ ಮಜ್ಜಿಗೆ, ರಾಮುಲು ಕೊಡಗಂಟಿ, ಆಯಾಜ್, ಭೀಮು, ಸುನಿಲ್ ಮೇಧಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
——
- Advertisement -
ತಾಲೂಕಿನದ್ಯಾಂತ ಕಾಮಗಾರಿಗಳು ನಡೆದಿದ್ದು ಗುತ್ತಿಗೆದಾರರು ಕಳಪೆ ಗುಣಮಟ್ಟದ ಪರಿಕರಗಳನ್ನು ಬಳಸದೆ ದೀರ್ಘಕಾಲಕ್ಕೆ ಬಾಳಿಕೆ ಬರುವ ರೀತಿಯಲ್ಲಿ ಕಾಮಗಾರಿ ಜರುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಂಬಂಧ ಪಟ್ಟ ಇಲಾಖೆಯವರು ಕಾಮಗಾರಿಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರ ಮೇಲೆ ಕ್ರಮಕೈಗೊಳ್ಳಬೇಕು.

ನಾಗೇಶ ಗದ್ದಿಗಿ, ಜಯ ಕರ್ನಾಟಕ ಸಂಘಟನೆ ತಾ. ಅಧ್ಯಕ್ಷ
- Advertisement -
ಕಾಮಗಾರಿಯು ರಾಜ್ಯ ಹೆದ್ದಾರಿಯಲ್ಲಿ ನಡೆಯಿತ್ತಿದ್ದು ವಿಭಜಕ ನಿರ್ಮಿಸುತ್ತಿರುವ ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮ ವಹಿಸದೆ ಕಾರ್ಯನಿರ್ವಹಿಸುತ್ತಿದ್ದಾರೆ, ಲಘು ಸೇರಿದಂತೆ ಭಾರಿ ವಾಹನ ಪಕ್ಕದಲ್ಲಿಯೇ ಸಂಚರಿಸುತ್ತಿದ್ದು ಕಾಮಗಾರಿ ನಡೆಯುತ್ತಿರುವ ಕುರಿತಾಗಿ ಬೋರ್ಡ್ ಹಾಕದಿರುವುದು ವಿಪರ್ಯಾಸ, ಗುತ್ತಿಗೆದಾರರೇ ಕೂಲಿ ಕಾರ್ಮಿಕರ ಜೀವನಕ್ಕೆ ಬೆಲೆಯಿಲ್ಲವೇ?

—ಮಲ್ಲಿಕಾರ್ಜುನ ಅದ್ಗಲ್, ಜಯ ಕರ್ನಾಟಕ ಸಂಘಟನೆ ಪದಾಧಿಕಾರಿ.

