ಕರ್ನಾಟಕದ ಶ್ರೀಗಂಧವು ವಿಶ್ವಪ್ರಸಿದ್ಧ. ಅದರ ಸುಗಂಧ ಮತ್ತು ಔಷಧೀಯ ಗುಣಗಳ ಕಾರಣದಿಂದಾಗಿ ವಿದೇಶಗಳಲ್ಲಿ ಇದರ ಬೇಡಿಕೆ ಅಪಾರವಾಗಿದೆ. ಆದರೆ ಇದೇ ಬೇಡಿಕೆ ಅಕ್ರಮ ಕಟಾವು ಮತ್ತು ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ಕಾನೂನು ಬಿಗಿಗೊಳಿಸಿದ್ದರೂ, ಲಾಭದಾಸೆಯೆಡೆಗೆ ಕಣ್ಣಿಟ್ಟ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಪುಷ್ಪ ಸಿನಿಮಾದಲ್ಲಿ ನೀವು ನೋಡಿದಂತೆ ರಕ್ತಚಂದನ ಕಳ್ಳಸಾಗಣೆ ಹೇಗೆ ನಡೆಯುತ್ತದೋ, ಅದೆ ರೀತಿ ಈಗ ನೈಜ ಜೀವನದಲ್ಲಿಯೂ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇತ್ತೀಚೆಗೆ ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿದ ಘಟನೆಯೊಂದು ಇದಕ್ಕೆ ನಿದರ್ಶನವಾಗಿದೆ ಎನ್ನಬಹುದು. ಈ ಬಾರಿ ಕಳ್ಳರು ಈರುಳ್ಳಿ ಮೂಟೆಯೊಳಗೆ ಶ್ರೀಗಂಧದ ತುಂಡುಗಳನ್ನು ಮರೆಮಾಡಿ ಸಾಗಿಸುತ್ತಿದ್ದರು!
ಆಂಧ್ರಪ್ರದೇಶದ ಕರ್ನೂಲ್‌ನಿಂದ ಬೆಂಗಳೂರಿನತ್ತ ಬರುತ್ತಿದ್ದ ವ್ಯಾನ್‌ನಿಂದ ಈ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸಿದ್ದಾಪುರ ಪೊಲೀಸರು ವ್ಯಾನ್‌ನ್ನು ತಡೆದು ಪರಿಶೀಲಿಸಿದಾಗ, ಮೊದಲ ನೋಟಕ್ಕೆ ಇದು ಸಾಮಾನ್ಯ ಈರುಳ್ಳಿ ಸಾಗಾಟವೆಂದು ಕಂಡಿತು. ಆದರೆ ತಪಾಸಣೆ ವೇಳೆ ಈರುಳ್ಳಿ ಚೀಲಗಳ ಅಡಿಯಲ್ಲಿ ಮರೆಮಾಡಲಾಗಿದ್ದ 18 ಮೂಟೆಗಳಲ್ಲಿ ಸುಮಾರು 750 ಕೆ.ಜಿ. ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ.
ಆಂಧ್ರದ ಸಿರಾಜ್ ಎಂಬಾತ ಈ ದೊಡ್ಡ ಅಕ್ರಮ ಚಟುವಟಿಕೆಯ ಮಾಸ್ಟರ್‌ಮೈಂಡ್ ಆಗಿದ್ದಾನೆ. ತನ್ನ ತಂಡದವರಾದ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್ ಮತ್ತು ರಾಮ್ ಭೂಪಾಲ್ ಜೊತೆ ಸೇರಿ, ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಮರಗಳನ್ನು ಕತ್ತರಿಸಿ, ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತರಲಾಗುತ್ತಿತ್ತು. ನಂತರ ಬೆಂಗಳೂರಿನ ಅಕ್ರಮ ಡೀಲರ್‌ಗಳ ಮೂಲಕ ಶ್ರೀಗಂಧವನ್ನು ವಿದೇಶಗಳಿಗೆ ವಿಶೇಷವಾಗಿ ಚೀನಾಗೆ ಕಳುಹಿಸುವ ಯೋಜನೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಿದ್ದಾಪುರ ಠಾಣಾ ಪೊಲೀಸರು ಅಡ್ಡಗಟ್ಟಿ ತಪಾಸಣೆ ನಡೆಸಿ ಈ ಕಳ್ಳರ ಕೃತ್ಯವನ್ನು ಪತ್ತೆಹಚ್ಚಿದರು. ಕಳ್ಳಸಾಗಣೆಗಾರರನ್ನು ಸ್ಥಳದಲ್ಲೇ ಬಂಧಿಸಿ, ವ್ಯಾನ್ ಸೇರಿದಂತೆ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 750 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳ ಮೌಲ್ಯ ಲಕ್ಷಾಂತರ ರೂ.ಗಳಲ್ಲಿ ಅಂದಾಜಿಸಲಾಗಿದೆ. ಪೊಲೀಸರು ಈಗ ಈ ಅಕ್ರಮ ಜಾಲದ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಡೀಲರ್ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ.
ಈ ಪ್ರಕರಣದಿಂದ ಸುವಾಸನೆಯ ಶ್ರೀಗಂಧದ ಹಿಂದೆ ಅಡಗಿರುವ ಅಕ್ರಮದ ದುರ್ವಾಸನೆ ಮತ್ತೆ ಹೊರಬಿದ್ದಂತಾಗಿದೆ.
