
ಬೆಳಗಾವಿ–ಗೋವಾ ಗಡಿ ಭಾಗದಲ್ಲಿ ಬೆಳಕಿಗೆ ಬಂದಿರುವ 400 ಕೋಟಿ ರೂಪಾಯಿ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಈ ಪ್ರಕರಣ ಇದೀಗ ತನಿಖಾ ಹಂತದಲ್ಲೇ ಹಲವು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕರ್ನಾಟಕ–ಮಹಾರಾಷ್ಟ್ರ–ಗೋವಾ ಮೂರು ರಾಜ್ಯಗಳ ಗಡಿ ಭಾಗದಲ್ಲಿರುವ ಚೋರ್ಲಾ ಘಾಟ್ ಈ ದರೋಡೆಗೆ ಏಕೆ ಆಯ್ಕೆಯಾಯ್ತು ಎಂಬುದೇ ಪ್ರಮುಖ ಕುತೂಹಲವಾಗಿದೆ.
ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ಧಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ಮೂಲ ತನಿಖೆ ಮಹಾರಾಷ್ಟ್ರ ಪೊಲೀಸರ ವಶದಲ್ಲಿದ್ದು, ಕರ್ನಾಟಕ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದರು. ಗಡಿ ಪ್ರದೇಶವಾದ ಕಾರಣ ಯಾರು ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ಜನವರಿ 6ರಂದು ನಾಸಿಕ್ ಜಿಲ್ಲೆಯ ಪೊಲೀಸ್ ಅಧಿಕಾರಿಯಿಂದ ಚೋರ್ಲಾ ಘಾಟ್‌ನಲ್ಲಿ ದೊಡ್ಡ ಮೊತ್ತದ ದರೋಡೆ ನಡೆದಿದೆ ಎಂಬ ಮಾಹಿತಿ ಪತ್ರದ ಮೂಲಕ ನಮಗೆ ಬಂದಿದೆ. ಈ ಪ್ರಕರಣ ಅಕ್ಟೋಬರ್ ತಿಂಗಳಲ್ಲಿ ನಡೆದಿರುವ ಸಾಧ್ಯತೆ ಇದೆ. ಸುಮಾರು 400 ಕೋಟಿ ರೂಪಾಯಿ ನಗದು ಅಪಹರಣವಾಗಿದೆ ಎಂಬ ಶಂಕೆಯ ಮೇರೆಗೆ ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಪಿ ವಿವರಿಸಿದರು.
ತನಿಖೆಯ ವೇಳೆ ಬೆಳಕಿಗೆ ಬಂದ ಮತ್ತೊಂದು ಅಂಶವೇ ಕಿಡ್ನ್ಯಾಪ್ ಪ್ರಕರಣ. ನಾಸಿಕ್‌ನಲ್ಲಿ ಸಂದೀಪ್ ಪಾಟೀಲ್ ಎಂಬ ವ್ಯಕ್ತಿಯನ್ನು ಅಪಹರಿಸಿ ವಿಚಾರಣೆ ನಡೆಸಿದಾಗ, ದರೋಡೆ ಬಗ್ಗೆ ಮಾಹಿತಿ ದೊರೆತಿದೆ. ಕಿಡ್ನ್ಯಾಪ್ ಮಾಡಿದವರು ಚೋರ್ಲಾ ಘಾಟ್ ಪ್ರದೇಶದಲ್ಲೇ ಹಣ ದರೋಡೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಖಾನಾಪುರ ಸಬ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಜೊತೆಗೆ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿದೆ.
ಚೋರ್ಲಾ ಘಾಟ್ ಪ್ರದೇಶವೇ ದರೋಡೆಗೆ ಸೂಕ್ತ ಸ್ಥಳವಾಗಿದ್ದೇಕೆ ಎಂಬ ಪ್ರಶ್ನೆಗೆ ಭೌಗೋಳಿಕ ಅಂಶಗಳೇ ಉತ್ತರವಾಗಿವೆ. ಈ ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಬಹುತೇಕ ಇಲ್ಲ. ಗೋವಾ ಗಡಿಯಿಂದ ಬೆಳಗಾವಿಯ ಜಾಂಬೋಟಿವರೆಗೆ ಗಂಟೆಗಳ ಕಾಲ ಸಂಪರ್ಕ ಕಡಿತವಾಗಿರುತ್ತದೆ. ಕಿರಿದಾದ ರಸ್ತೆಗಳು, ಅರಣ್ಯ ದಾರಿಗಳು, ಸಣ್ಣ ವಾಹನಗಳು ಮಾತ್ರ ಸಂಚರಿಸಬಹುದಾದ ಹಾದಿಗಳು ಇಲ್ಲಿ ಇವೆ. ಒಂದು ವಾಹನದಿಂದ ಮತ್ತೊಂದಕ್ಕೆ ಹಣ ವರ್ಗಾಯಿಸಿ ಕಣ್ಮರೆಯಾಗಲು ಇದು ಸೂಕ್ತ ಪ್ರದೇಶ ಎನ್ನುವುದು ತನಿಖಾಧಿಕಾರಿಗಳ ಅನುಮಾನ.
ಈ ಪ್ರಕರಣದಲ್ಲಿ ಇದುವರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಎಸ್‌ಐಟಿ ತಂಡ ಈಗಾಗಲೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇಂದು ಮತ್ತೊಬ್ಬ ಆರೋಪಿಯನ್ನೂ ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆಯಿಂದ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ಚೋರ್ಲಾ ಘಾಟ್‌ನಲ್ಲಿ ಮುಂದಿನ ದಿನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಎಸ್‌ಪಿ ರಾಮರಾಜನ್ ತಿಳಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದಾರೆ.
ದೇಶದ ದರೋಡೆ ಇತಿಹಾಸದಲ್ಲೇ ಅಪರೂಪದ ಪ್ರಕರಣವೆನ್ನಲಾಗುತ್ತಿರುವ ಈ ಘಟನೆ, ಗಡಿ ಪ್ರದೇಶಗಳ ಭದ್ರತೆ ಮತ್ತು ಹಣ ಸಾಗಣೆಯ ಮೇಲ್ವಿಚಾರಣೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಸತ್ಯಗಳು ಹೊರಬರುವ ನಿರೀಕ್ಷೆಯಿದೆ.
