ಭಾರತದ ಆಡಳಿತ, ಯೋಜನಾ ರೂಪಣೆ ಮತ್ತು ಸಾಮಾಜಿಕ–ಆರ್ಥಿಕ ನೀತಿಗಳ ಆಧಾರಸ್ತಂಭವೆಂದೇ ಪರಿಗಣಿಸಲ್ಪಡುವ ಜನಗಣತಿ ಇದೀಗ ದೊಡ್ಡ ರೂಪಾಂತರಕ್ಕೆ ಸಜ್ಜಾಗಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಭಾರತದ ಜನಗಣತಿ ಪ್ರಕ್ರಿಯೆ ಮೊದಲ ಬಾರಿಗೆ ಪೂರ್ಣಡಿಜಿಟಲ್ ಪದ್ದತಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ₹11,718 ಕೋಟಿ ರೂಪಾಯಿ ಅನುದಾನವನ್ನು ಅನುಮೋದಿಸಿದೆ. ಕೋವಿಡ್ ನಂತರ ಅನೇಕ ವಿಳಂಬಗಳನ್ನು ಎದುರಿಸಿದ್ದ ರಾಷ್ಟ್ರೀಯ ಗಣತಿ ಪ್ರಕ್ರಿಯೆ ಇದೀಗ 2027ರಲ್ಲಿ ಪೂರ್ಣಗೊಳ್ಳಲಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದೇಶದ ಜನಸಂಖ್ಯೆ, ವಸತಿ ವ್ಯವಸ್ಥೆ ಮತ್ತು ಸಾಮಾಜಿಕ–ಆರ್ಥಿಕ ಸ್ಥಿತಿಯ ನಿಖರ ಚಿತ್ರಣ ನೀಡುವ ಈ ಸೆನ್ಸಸ್ ಭಾರತದಲ್ಲಿ ನೀತಿ–ಯೋಜನೆಗಳಿಗೆ ಮೂಲದಾಖಲೆಯಂತಿದೆ.
ಎರಡು ಹಂತಗಳ ಡಿಜಿಟಲ್ ಜನಗಣತಿ:
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದಂತೆ, ಜನಗಣತಿ 2026–27 ರ ಅವಧಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಈ ಬಾರಿ ಕಾಗದ–ಪೆನ್ ಪದ್ಧತಿಯ ಬದಲು ಸಂಪೂರ್ಣ ಡಿಜಿಟಲ್ ಆಧಾರಿತ ವ್ಯವಸ್ಥೆ ಅಳವಡಿಕೆಯಾಗುತ್ತಿದೆ.
ಹಂತ I: ಮನೆ ಪಟ್ಟಿ ಮತ್ತು ವಸತಿ ಜನಗಣತಿ
ಅವಧಿ: ಏಪ್ರಿಲ್–ಸೆಪ್ಟೆಂಬರ್ 2026
ಪ್ರತಿಯೊಂದು ರಾಜ್ಯ/ಯುಟಿಗಳ ಅನುಕೂಲಕ್ಕೆ ಅನುಗುಣವಾಗಿ 30 ದಿನಗಳ ಅವಧಿಯಲ್ಲಿ ಕಾರ್ಯ.
ದೇಶದ ಮನೆಗಳ ಸಂಖ್ಯೆ, ವಸತಿಯ ಗುಣಮಟ್ಟ, ಮೂಲಭೂತ ಸೌಲಭ್ಯಗಳ ಲಭ್ಯತೆ ಸೇರಿದಂತೆ ಪ್ರಮುಖ ಮಾಹಿತಿ ಸಂಗ್ರಹ.
ಹಂತ II: ಜನಸಂಖ್ಯಾ ಗಣತಿ (Population Enumeration – PE)
ಅವಧಿ: ಫೆಬ್ರವರಿ 2027
ಆದರೆ ಹಿಮದಿಂದ ಆವೃತ ಪ್ರದೇಶಗಳಾದ ಜಮ್ಮು–ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ PE ಸೆಪ್ಟೆಂಬರ್ 2026ರಲ್ಲಿ ನಡೆಯಲಿದೆ.
ಮೊದಲ ಡಿಜಿಟಲ್ ಸೆನ್ಸಸ್ ರಿಯಲ್-ಟೈಮ್ ಮೇಲ್ವಿಚಾರಣೆ:
ಈ ಬಾರಿ ಸಂಪೂರ್ಣ ಪ್ರಕ್ರಿಯೆ:
ಹೊಸ Census Management and Monitoring System (CMMS) ಪೋರ್ಟಲ್ ಮೂಲಕ, ರಿಯಲ್–ಟೈಮ್ ಟ್ರ್ಯಾಕಿಂಗ್, ಉತ್ತಮ ದತ್ತಾಂಶ ಭದ್ರತಾ ವ್ಯವಸ್ಥೆ, ಕಡಿಮೆ ಮಾನವ ದೋಷಗಳು, ವೇಗವಾದ ಡೇಟಾ ಸಂಸ್ಕರಣೆ ಮತ್ತು ವರದಿ ಸಾದ್ಯವಾಗಲಿದೆ. ಈಗಾಗಲೇ ಮಾಹಿತಿ ಸುರಕ್ಷತೆ, ಡೇಟಾ ಸಂಗ್ರಹಣೆ ಮತ್ತು ಡೇಟಾ ವರ್ಗಾವಣೆ ಪ್ರಕ್ರಿಯೆ ಡಿಜಿಟಲ್ ವಿನ್ಯಾಸ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.
2021ರ ಜನಗಣತಿ ಮುಂದೂಡಿಕೆ ಈಗ 2027ಕ್ಕೆ:
ಭಾರತದ ಕೊನೆಯ ಜನಗಣತಿ 2011ರಲ್ಲಿ ನಡೆದಿತ್ತು. 2021ರಲ್ಲಿ ನಡೆಯಬೇಕಿದ್ದ ಸೆನ್ಸಸ್ ಕೋವಿಡ್ ಮಹಾಮಾರಿಯಿಂದ ಮುಂದೂಡಲ್ಪಟ್ಟಿತ್ತು. ಕಳೆದ ದಶಕದಲ್ಲಿ ಜನಸಂಖ್ಯೆ, ವಲಸೆ, ನಗರೀಕರಣ ಹಾಗೂ ಸಾಮಾಜಿಕ ಬದಲಾವಣೆಗಳಲ್ಲಿ ಸಂಭವಿಸಿದ ದೊಡ್ಡ ಬದಲಾವಣೆಗಳನ್ನು ಗಮನಿಸಿದರೆ 2027ರ ಜನಗಣತಿ ಅತ್ಯಂತ ಮಹತ್ವದ್ದಾಗಿದೆ.
ಅಧಿಕಾರಿಗಳ ನೇಮಕಾತಿ ಜನವರಿ 15ರ ಗಡುವು:
ಜನಗಣತಿ ನಡೆಸಲು ಅಗತ್ಯವಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಯ ನಿಯೋಜನೆ ಜನವರಿ 15, 2026ರೊಳಗೆ ಪೂರ್ಣಗೊಳಿಸಲು ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯ (RGI) ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಮನೆ-ಮನೆಗೆ ತೆರಳಿ ಮಾಹಿತಿಯನ್ನು ದಾಖಲಿಸುವ ಈ ಅಧಿಕಾರಿಗಳೇ ಗಣತಿಯ ಮುಖ್ಯ ಅಸ್ತ್ರವಾಗಲಿದ್ದಾರೆ.
ಬೃಹತ್ ಬಜೆಟ್, ಡಿಜಿಟಲ್ ತಂತ್ರಜ್ಞಾನ ಮತ್ತು ಸ್ಪಷ್ಟ ಹಂತಬದ್ಧ ಯೋಜನೆಯೊಂದಿಗೆ ನಡೆಯಲಿರುವ 2027ರ ಜನಗಣತಿ ಭಾರತಕ್ಕೆ ಹೊಸ ಯುಗದ ದಾರಿ.
